ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಬಂಧನಕ್ಕೊಳಗಾಗಿರುವ ರೈತರಿಗೆ 2 ಲಕ್ಷ ಪರಿಹಾರ- ಪಂಜಾಬ್ ಸರ್ಕಾರ

ಚಂಡೀಗಢ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಬಂಧನಕ್ಕೊಳಗಾಗಿರುವ 83 ರೈತರಿಗೆ ಆರ್ಥಿಕ ನೆರವು ನೀಡಲು ತಲಾ 2 ಲಕ್ಷ ರೂ. ಪರಿಹಾರವನ್ನು ಪಂಜಾಬ್ ಸರ್ಕಾರ ಘೋಷಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಪರವಾಗಿ ನಮ್ಮ ಸರ್ಕಾರ ಇದೆ. ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಬಂಧನಕ್ಕೊಳಗಾಗಿರುವ ರೈತರಿಗೆ ತಲಾ ಎರಡು ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕಗೆ ತೆರಳಿದ ಅಪ್ಪು ಮಗಳು ಧೃತಿ

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಭಾಗಗಳಲ್ಲಿ ಪಂಜಾಬ್, ಹರಿಯಾಣ ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರವನ್ನು ಖಾಸಗಿಯವರ ಕೈಗಳಿಗೆ ನೀಡುವ ಹುನ್ನಾರ ಎಂದು ರೈತರು ಆರೋಪಿಸಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಅಲ್ಲೆಗಳೆದಿದ್ದು, ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿದೆ. ಆದರೆ ಅವುಗಳನ್ನು ಹಿಂಪಡೆಯುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನನ್ನ ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ: ಕಂಗನಾ ರಣಾವತ್

ರೈತರು ಜನವರಿ ವೇಳೆ ಟ್ರ್ಯಾಕ್ಟರ್ ರ್‍ಯಾಲಿ ಹಮ್ಮಿಕೊಂಡಿದ್ದರು. ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕುವ ರೈತರು ಯೋಜನೆ ರೂಪಿಸಿದ್ದರು. ಆಗ ಎಲ್ಲೆಡೆ ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅದನ್ನೂ ಲೆಕ್ಕಿಸದೇ ರೈತರು ಕೆಂಪು ಕೋಟೆ ಪ್ರವೇಶಿಸಿ ಧ್ವಜಾರೋಹಣ ಮಾಡಿದ್ದರು. ಈ ವೇಳೆ ಹಲವರನ್ನು ಬಂಧಿಸಲಾಗಿತ್ತು.

Comments

Leave a Reply

Your email address will not be published. Required fields are marked *