ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

ಚಂಡೀಗಢ: ಫಿರೋಜ್‍ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಯಾದ ಭದ್ರತೆಯನ್ನು ನೀಡಲಾಗದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಪಂಜಾಬ್‍ನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.

ಲುಧಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಚರಂಜಿತ್ ಚನ್ನಿ ಅವರು ಪಂಜಾಬ್‍ನಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ರಚಿಸುವ ಕನಸು ಕಾಣುತ್ತಿದ್ದಾರೆ. ಆದರೆ ಅವರು ದೇಶದ ಪ್ರಧಾನಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ವಿಫಲವಾದ ಮುಖ್ಯಮಂತ್ರಿ ಎನಿಸಿದ್ದಾರೆ. ಇಂತಹವರು ಪಂಜಾಬ್‍ಗೆ ಭದ್ರತೆಯನ್ನು ಒದಗಿಸಲು ಸಾಧ್ಯವೆ ಎಂದು ಕಿಡಿಕಾರಿದರು.

ಕಳೆದ ತಿಂಗಳು ಪಂಜಾಬ್‍ನ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30 ಕಿಮೀ ದೂರದಲ್ಲಿ ಕೆಲವು ಪ್ರತಿಭಟನಾಕಾರರು ರಸ್ತೆ ತಡೆಯಿಂದಾಗಿ 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಸಿಲುಕಿಕೊಂಡಿತ್ತು.

ಇದೇ ವೇಳೆ ಪಂಜಾಬ್ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದರೆ ಡ್ರಗ್ಸ್ ಸಮಸ್ಯೆಯನ್ನು ನಿವಾರಿಸಲು ಹೆಚ್ಚಿನ ಮಹತ್ವ ನೀಡುತ್ತದೆ. ಪಂಜಾಬ್‍ನಲ್ಲಿ ಸರ್ಕಾರ ರಚನೆಯಾದ ನಂತರ, ನಾವು ರಾಜ್ಯದ ನಾಲ್ಕು ನಗರಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾಖೆಗಳನ್ನು ಸ್ಥಾಪಿಸುತ್ತೇವೆ. ಜೊತೆಗೆ ಮಾದಕ ದ್ರವ್ಯ ತಡೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆ ರಚಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮತ್ತೆ ಜಾತಿಗಣತಿ ಒಪ್ಪಿಕೊಳ್ಳುವಂತೆ ಸಿದ್ದರಾಮಯ್ಯ ಒತ್ತಾಯ

ಫೆಬ್ರವರಿ 20ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತವನ್ನು ಗಳಿಸಿತ್ತು ಮತ್ತು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಸ್‍ಎಡಿ-ಬಿಜೆಪಿ ಸರ್ಕಾರವನ್ನು ಸೋಲಿಸಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

Comments

Leave a Reply

Your email address will not be published. Required fields are marked *