ಕೊರೊನಾದಿಂದ ಮೃತಪಟ್ಟ ತಾಯಿ – ಅಂತ್ಯಕ್ರಿಯೆ ಮಾಡಲು ಒಪ್ಪದ ಮಗ

ಚಂಡೀಗಢ: ತನಗೆ ಕೊರೊನಾ ಸೋಂಕು ತಗಲುತ್ತದೆ ಎಂಬ ಭಯದಿಂದ ಕೊರೊನಾದಿಂದ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆ ಮಾಡಲು ಮಗ ಒಪ್ಪದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಪಂಜಾಬ್ ರಾಜ್ಯದ ಶಿಮ್ಲಾಪುರಿ ಗ್ರಾಮದ 69 ವರ್ಷದ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಮಾರ್ಚ್ 31ರಂದು ದಾಖಲು ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ತೀವ್ರವಾದ ಕಾರಣ ಅವರು ಕಳೆದ ಭಾನುವಾರ ಮೃತಪಟ್ಟಿದ್ದಾರೆ.

ಭಾನುವಾರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೃತಪಟ್ಟ ನಂತರ ಆಸ್ಪತ್ರೆಯವರು ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಲು ನೋಡಿದ್ದಾರೆ. ಆದರೆ ಮನೆಯವರು ಮೃತದೇಹವನ್ನು ನೋಡಲು ಹತ್ತಿರ ಸಹ ಬಂದಿಲ್ಲ. ಇನ್ನೊಂದು ವಿಪರ್ಯಾಸವೆಂದರೆ ಅಂತ್ಯಕ್ರಿಯೆ ನಡೆಸಲು ಬೇಕಾದ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ ಎಂದರೂ ಆಕೆಯ ಮಗ ಅಂತಿಮ ವಿಧಿವಿಧಾನ ನಡೆಸಲು ಮುಂದೆ ಬರಲಿಲ್ಲ.

ಈ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಇಕ್ಬಾಲ್ ಸಿಂಗ್ ಸಂಧು ಅವರು, ಅಂತ್ಯಕ್ರಿಯೆ ಮಾಡಲು ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ. ಜೊತೆಗೆ ಸೋಂಕು ನಿಮಗೆ ತಗುಲದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರೂ ಆಕೆಯ ಮಗ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಇದನ್ನು ಕಂಡು ನಮಗೆ ಶಾಕ್ ಆಯ್ತು. ಕೊನೆಗೆ ಜಿಲ್ಲಾಡಳಿತದ ಕಡೆಯಿಂದ ಅಂತ್ಯಕ್ರಿಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತದಿಂದ ಸೋಮವಾರ ರಾತ್ರಿ ಕೊರೊನಾ ಸೋಂಕಿತಳ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ಈ ಸಮಯದಲ್ಲೂ ಆಕೆಯ ಕುಟುಂಬದವರು ಮತ್ತು ಮಗ ಹತ್ತಿರ ಕೂಡ ಬರಲಿಲ್ಲ. ಕೊನೆಯದಾಗಿ ಆಕೆಯ ಮುಖವನ್ನು ಅವರು ನೋಡಲಿಲ್ಲ. 100 ಮೀಟರ್ ದೂರದಲ್ಲಿ ನಿಂತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಎಂದು ಇಕ್ಬಾಲ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ. ಇದೇ ರೀತಿಯ ಘಟನೆ ಪಂಜಾಬ್‍ನಲ್ಲಿ ಇನ್ನೊಂದು ನಡೆದಿದ್ದು, ಕೊರೊನಾದಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಆ ಊರಿನವರು ಸ್ಮಶಾನಕ್ಕೆ ಸ್ಥಳವನ್ನು ನೀಡಿರಲಿಲ್ಲ.

Comments

Leave a Reply

Your email address will not be published. Required fields are marked *