ಸೋನು ಸೂದ್ ಸಹೋದರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಅಸಮಾಧಾನ – ಪಂಜಾಬ್‍ನ ಕಾಂಗ್ರೆಸ್ ಶಾಸಕ ಬಿಜೆಪಿ ಸೇರ್ಪಡೆ

ಚಂಡೀಗಢ: ಪಂಚ ರಾಜ್ಯಗಳ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್‍ಗೆ ಸ್ಥಾನ ನೀಡಿರುವುದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಶಾಸಕ ಹರ್ಜೋತ್ ಕಮಲ್ ಅವರು ಬಿಜೆಪಿಗೆ ಸೇರಿದ್ದಾರೆ.

ಈ ಬಗ್ಗೆ ಮಾತನಾಡಿದ ಹರ್ಜೋತ್ ಕಮಲ್, ನನಗೆ ಚುನಾವಣೆಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಂಡರೂ ಅವರು ಟಿಕೆಟ್ ನೀಡಿಲ್ಲ. ಇದರಿಂದ ನನಗೆ ಅವಮಾನ ಆಗಿದೆ. ಆದ್ದರಿಂದ ನಾನು ಬಿಜೆಪಿಯನ್ನು ಸೇರಿದ್ದೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮೊಗಾ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೂ ನನ್ನನ್ನು ಭೇಟಿಯಾಗದೇ ನೇರವಾಗಿ ಮಾಳವಿಕಾ ಸೂದ್ ಮನೆಗೆ ಹೋಗಿದ್ದು, ಇದು ನನಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.

ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿರುವುದಕ್ಕೆ ನನ್ನ ಅಭ್ಯಂತರವಿಲ್ಲ. ಸೋನು ಸೂದ್ ಅವರೇ ಕಾಂಗ್ರೆಸ್‍ನಿಂದ ಸ್ಪರ್ಧಿಸಬಹುದಿತ್ತು. ಮಾಳವಿಕಾ ಸೂದ್ ನನ್ನ ಸಹೋದರಿಯಿದ್ದಂತೆ. ಆದರೆ ಕಾಂಗ್ರೆಸ್ ನಾಯಕರು ನನಗೆ ಮೊಗದಿಂದ ಟಿಕೆಟ್ ನೀಡದಿರುವುದು ಬೇಸರವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

ಯುವ ಕಾಂಗ್ರೆಸ್ ನಾಯಕನಾಗಿ ಕಳೆದ 21 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. ಮೊಗ ಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ತರಲು ಅತಿ ಹೆಚ್ಚು ಶ್ರಮಿಸಿದ್ದೇನೆ. ಆದರೂ ಪಕ್ಷ ನನ್ನನ್ನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

ಪಂಜಾಬ್ ವಿಧಾನಸಭಾ ಚುನಾವಣೆ ಫೆ.14ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಮತ್ತು ಎಎಪಿ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳ 9 ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ.

Comments

Leave a Reply

Your email address will not be published. Required fields are marked *