ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

ಚಂಡೀಗಢ: ಗುರು ರವಿದಾಸ್‌ ಜಯಂತಿ ಇರುವುದರಿಂದ ಫೆಬ್ರವರಿ 14ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಆರು ದಿನಗಳ ಕಾಲ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮನವಿ ಮಾಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರಿಗೆ ಪತ್ರ ಬರೆದಿರುವ ಪಂಜಾಬ್‌ ಸಿಎಂ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.32 ರಷ್ಟು ಇರುವ ಪರಿಶಿಷ್ಟ ಜಾತಿ ಸಮುದಾಯದ ಕೆಲವು ಪ್ರತಿನಿಧಿಗಳು, ಗುರು ರವಿದಾಸ್‌ ಅವರ ಜನ್ಮದಿನ ಫೆಬ್ರವರಿಯಲ್ಲೇ ನಡೆಯಲಿದೆ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

ಗುರು ರವಿದಾಸ್‌ ಅವರ ಜಯಂತಿ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯದ ಲಕ್ಷಾಂತರ ಜನರು ಉತ್ತರ ಪ್ರದೇಶದ ಬನಾರಸ್‌ಗೆ ಫೆಬ್ರವರಿ 10ರಿಂದ 16ರವರೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾನ ಅವರ ಸಂವಿಧಾನಬದ್ಧ ಹಕ್ಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಫೆಬ್ರವರಿ 10ರಿಂದ 16ರವರೆಗೆ ಬನಾರಸ್‌ಗೆ ಭೇಟಿ ನೀಡಲು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವ ರೀತಿಯಲ್ಲಿ ಮತದಾನದ ದಿನಾಂಕವನ್ನು ವಿಸ್ತರಿಸಬಹುದು ಎಂದು ಸಮುದಾಯದ ಪ್ರತಿನಿಧಿಗಳು ಮನವಿ ಮಾಡಿದ್ದಾರೆಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

2022ರ ಪಂಜಾಬ್‌ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಕನಿಷ್ಠ 6 ದಿನಗಳವರೆಗೆ ಮುಂದೂಡಿ ಫೆ.20ಕ್ಕೆ ನಿಗದಿಪಡಿಸಬಹುದು. ಆ ಮೂಲಕ ಸುಮಾರು 20 ಲಕ್ಷ ಜನತೆ ಮತದಾನ ಮಾಡಲು ಅನುವು ಮಾಡಿಕೊಡುವುದು ನ್ಯಾಯಯುತ ಮತ್ತು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಘೋಷಿಸಿತ್ತು.

Comments

Leave a Reply

Your email address will not be published. Required fields are marked *