ನನ್ನ ಜೀವನ ಇರೋ ತನಕ ಗುರುವನ್ನ ಮರೆಯಲ್ಲ- ಅಮ್ಮನ ತಬ್ಬಿಕೊಂಡು ಕಲಾವತಿ ಕಣ್ಣೀರು

– ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ, ಎಲ್ಲಿದ್ದರೂ ಚೆನ್ನಾಗಿರಲಿ
– ನಮ್ಮ ಮನೆಯವರ ಪರಿಸ್ಥಿತಿ ಯಾರಿಗೂ ಬರಬಾರದು

ಮಂಡ್ಯ: ಫೆಬ್ರವರಿ 14 ಪ್ರೇಮಿಗಳ ದಿನ. ಆದರೆ ಆ ದಿನ ನನಗೆ ದುಃಖ ತುಂಬಿ ಬರುತ್ತದೆ. ನನ್ನ ಜೀವನ ಇರುವ ತನಕ ಗುರು ಅವರನ್ನು ನಾನು ಮರೆಯಲ್ಲ ಎಂದು ಹುತಾತ್ಮ ಗುರು ಪತ್ನಿ ಕಲಾವತಿ ಪತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ದೇಶ ಕಾಯುವ ಜೊತೆ ಗುರು ನಮ್ಮ ಮನೆಯನ್ನು ಕಾಯುತ್ತಿದ್ದ – ತಾಯಿ ಚಿಕ್ಕತಾಯಮ್ಮ

ಹುತಾತ್ಮ ಯೋಧ ಗುರು ವರ್ಷದ ತಿಥಿ ಹಿನ್ನೆಲೆಯಲ್ಲಿ ಇಂದು ಪತ್ನಿ ಕಲಾವತಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ಗುರು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಫೆಬ್ರವರಿ 14 ರಂದು ಗುರು ತಂದೆ-ತಾಯಿ ಹಾಗೂ ಸ್ನೇಹಿತರು ಪೂಜೆ ಸಲ್ಲಿಸಿದ್ದರು. ಇಂದು ಗುರು ಪತ್ನಿ ಹಾಗೂ ಪತ್ನಿಯ ಸಂಬಂಧಿಕರು ಪೂಜೆ ಸಲ್ಲಿಸಲಿದ್ದಾರೆ.

ಗುರು ತಾಯಿ ಹಾಗೂ ಪತ್ನಿ ನಡುವೆ ಕಲಹದ ಹಿನ್ನೆಲೆಯಲ್ಲಿ ಗುರುವಿಗೆ ಎರಡೆರಡು ಬಾರಿ ವರ್ಷದ ತಿಥಿಯನ್ನು ಮಾಡಲಾಗಿದೆ. ಇಂದು ಅನ್ನಸಂತರ್ಪಣೆ ಹಾಗೂ ಇತರೆ ಕಾರ್ಯಕ್ರಮವನ್ನು ಕಲಾವತಿ ಹಮ್ಮಿಕೊಂಡಿದ್ದಾರೆ. ಈಗಾಗಲೇ ಅನ್ನದಾನಕ್ಕೆ ಸಿದ್ಧತೆ ಮಾಡುತ್ತಿದ್ದು, ಕಲಾವತಿಗೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಕಲಾವತಿ, ಅವರನ್ನು ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಮನೆಯವರ ಪರಿಸ್ಥಿತಿ ಯಾರಿಗೂ ಬೇಡ. ಮತ್ತೆ ಭಾರತೀಯ ಯೋಧರಿಗೆ ಈ ರೀತಿ ಅಟ್ಯಾಕ್ ಆಗಬಾರದು. ಅವರಿಗೆ ದೇವರು ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು.

ಫೆಬ್ರವರಿ 14 ಪ್ರೇಮಿಗಳು ದಿನ. ಅಂದು ಎಲ್ಲರೂ ಖುಷಿಯಿಂದ ಇರುತ್ತಾರೆ. ಆದರೆ ಅವತ್ತೇ ಅಟ್ಯಾಕ್ ಆದ ದಿನ. ಹೀಗಾಗಿ ನಾನು ಖುಷಿಪಡಬೇಕೋ, ಅಳಬೇಕೋ ಒಂದು ಗೊತ್ತಾಗಿಲ್ಲ. ಆದರೆ ನಾನು ಅವರನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಜೀವನ ಇರುವ ತನಕ ಗುರು ಅವರನ್ನು ನಾನು ಮರೆಯಲ್ಲ. ಗುರು ಅವರ ಪುಣ್ಯ ತಿಥಿಯನ್ನು ಇಂದು ಮಾಡುತ್ತಿದ್ದೇವೆ. ನಮ್ಮ ಕುಟುಂಬ ಸದಸ್ಯರು ಇಲ್ಲಿ ಭಾಗವಹಿಸುತ್ತಾರೆ. ಅನ್ನಸಂತರ್ಪಣೆ ಮಾಡುತ್ತಿದ್ದೇವೆ ಎಂದು ಪತಿಯನ್ನು ನೆನೆದು ಅಮ್ಮನನ್ನ ತಬ್ಬಿಕೊಂಡು ಕಲಾವತಿ ಕಣ್ಣೀರಿಟ್ಟಿದ್ದಾರೆ.

ಗಂಡನ ಮನೆಯವರ ಬಗ್ಗೆ ಕೇಳಿದ್ದಕ್ಕೆ, ನಾನು ಪೂಜೆ ಮಾಡಿದ ಬಳಿಕ ಆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು. ಫೆಬ್ರವರಿ 14 ರಂದು ಗುರು ತಾಯಿ ಸಮಾಧಿಗೆ ಪೂಜೆ ಮಾಡುವಾಗ ಸೊಸೆ ಕಲಾವತಿ ಬಂದಿಲ್ಲ ಎಂದು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *