ಮದ್ವೆಗೆ ಖರ್ಚು ಮಾಡಬೇಕಿದ್ದ ಹಣ ದೇಣಿಗೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ

ಮುಂಬೈ: ಲಾಕ್‍ಡೌನ್ ನಡುವೆಯೂ ಅನೇಕ ಜೋಡಿಗಳು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಬಾಲಿವುಡ್‍ನ ಕಿರುತೆರೆ ಜೋಡಿಯೊಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಅವರ ಮದುವೆಗೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ದೇಣಿಯಾಗಿ ನೀಡಲು ಮುಂದಾಗಿದ್ದಾರೆ.

ನಟಿ ಪೂಜಾ ಬ್ಯಾನರ್ಜಿ ತಮ್ಮ ಬಹುಕಾಲದ ಗೆಳೆಯ ಕುನಾಲ್ ವರ್ಮಾರನ್ನು ವರಿಸಿದ್ದಾರೆ. ಈ ಜೋಡಿ ಏಪ್ರಿಲ್ 15 ರಂದು ಅದ್ಧೂರಿಯಾಗಿ ಮದುವೆಯಾಗಲು ತಯಾರಿ ಮಾಡಿಕೊಂಡಿತ್ತು. ಆದರೆ ಕೊರೊನಾದ ಲಾಕ್‍ಡೌನ್ ಕಾರಣದಿಂದ ಇಬ್ಬರೂ ತಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಆದರೆ ಇವರಿಬ್ಬರು ಈಗ ಮದುವೆಯಾಗಿದ್ದು, ಪೂಜಾ ಬ್ಯಾನರ್ಜಿ ತಮ್ಮ ವಿವಾಹದ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಈ ಜೋಡಿ ಸುಮಾರು 10 ವರ್ಷಗಳ ಕಾಲ ಡೇಟಿಂಗ್‍ನಲ್ಲಿದ್ದು, ಇಬ್ಬರು ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಏಪ್ರಿಲ್ 15 ರಂದು ಅದ್ಧೂರಿಯಾಗಿ ವಿವಾಹವಾಗಬೇಕೆಂದು ಅಂದುಕೊಂಡಿದ್ದರು. ಇದಕ್ಕೆ ತಯಾರಿ ಕೂಡ ಮಾಡಿಕೊಂಡಿದ್ದರು. ಆದರೆ ಲಾಕ್‍ಡೌನ್‍ನಿಂದ ಇದು ಸಾಧ್ಯವಾಗಿಲ್ಲ. ಈ ಬಗ್ಗೆ ನಟಿ ಪೂಜಾ ಬ್ಯಾನರ್ಜಿ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

“ಈ ದಿನ ನಮ್ಮ ಮದುವೆ ಸಂಭ್ರಮ ನಡೆಯಬೇಕಿತ್ತು. ಆದರೆ ನಾವೇ ಅದ್ಧೂರಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದೆವು. ನಾವು ಒಂದು ತಿಂಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದೆವು. ಹೀಗಾಗಿ ನಾವಿಬ್ಬರು ಅಧಿಕೃತವಾಗಿ ಗಂಡ-ಹೆಂಡತಿ. ನಮ್ಮ ಪೋಷಕರು ಮತ್ತು ಅಜ್ಜಿ-ಅಜ್ಜ ಆಶೀರ್ವಾದ ಮತ್ತು ಶುಭಾಶಯಗಳೊಂದಿಗೆ ನಾವು ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬದವರು ಖುಷಿಯಿಂದ ಇದ್ದಾರೆ” ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದೆ. ಈ ರೋಗದ ವಿರುದ್ಧ ಹೋರಾಡುವ ಪ್ರತಿಯೊಬ್ಬರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪಾರ್ಥಿಸುತ್ತೇನೆ. ಈ ವೇಳೆ ನಮ್ಮ ಕಡೆಯಿಂದ ಒಂದು ಸಣ್ಣ ಕೊಡುಗೆ, ನಮ್ಮ ಮದುವೆ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದೇವೆ. ಈ ವೇಳೆ ಮದುವೆ ಆಚರಿಸುವುದು ಸರಿಯಲ್ಲ. ಜಗತ್ತು ಮೊದಲಿನ ಸ್ಥಿತಿಗೆ ಬರಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪೂಜಾ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು, ಸಹ ಕಲಾವಿದರು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

https://www.instagram.com/p/B_AQpP0Anj2/?utm_source=ig_embed

Comments

Leave a Reply

Your email address will not be published. Required fields are marked *