ಗುರುವಾರದಿಂದ ದ್ವಿತೀಯ ಪಿಯುಸಿ ಎಕ್ಸಾಂ ಪ್ರಾರಂಭ- ಪಿಯು ಬೋರ್ಡ್ ತಯಾರಿ ಹೀಗಿದೆ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಎಕ್ಸಾಂ ಗುರುವಾರದಿಂದ ಆರಂಭವಾಗಲಿದೆ. ಎಕ್ಸಾಂಗೆ ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದ್ದು, ಸಿಸಿಟಿವಿ ಕಣ್ಗಾವಲಲ್ಲಿ ಎಕ್ಸಾಂ ನಡೆಯಲಿದೆ.

ನಾಳೆಯಿಂದ ಮಾರ್ಚ್ 17 ವರೆಗೆ ಪರೀಕ್ಷೆಗಳು ನಡೆಯಲಿದ್ದು, ಮೊದಲ ದಿನವಾದ ನಾಳೆ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ಪರೀಕ್ಷೆ ನಡೆಯಲಿವೆ. ಕಳೆದ ವರ್ಷದಂತೆ ಕರ್ನಾಟಕ ಎಕ್ಸಾಮೀನೇಷನ್ ಸೆಕ್ಯೂರ್ ಸಿಸ್ಟಮ್‍ನಲ್ಲಿ ಪರೀಕ್ಷೆ ನಡೆಯಲಿದ್ದು, ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಆರ್ ಎಸ್ ಅಳವಡಿಕೆ ಮಾಡಲಾಗುತ್ತಿದೆ.

ಈ ಬಾರಿ ಒಟ್ಟು 6,90,152 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 3,52,292 ವಿದ್ಯಾರ್ಥಿಗಳು ಹಾಗೂ 3,37,860 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 1,004 ಪರೀಕ್ಷೆ ಕೇಂದ್ರಗಳಿವೆ. 1,004 ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. 32 ಜಿಲ್ಲಾ ಹಾಗೂ 286 ತಾಲೂಕು ಜಾಗೃತ ದಳಗಳ ನೇಮಕ. ಸಿಟ್ಟಿಂಗ್ ಸ್ಕ್ವಾಡ್, ಸಂಚಾರಿ ಸ್ಕ್ವಾಡ್‍ಗಳ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತಕ್ಕಾಗಿ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಸಂಚಾರ ಮಾಡುವ ಅನುಕೂಲ ಮಾಡಿಕೊಡಲಾಗಿದ್ದು, ಸೂಕ್ಷ್ಮ, ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆ
* ಪರೀಕ್ಷಾ ಹಿಂದಿನ ದಿನ ರಾತ್ರಿ ಹೆಚ್ಚು ನಿದ್ರೆ ಕೆಡಬೇಡಿ.
* ಪಾಯಿಂಟ್ಸ್ ಗಳ ರೂಪದಲ್ಲಿ ಪಠ್ಯವನ್ನ ಮನಸ್ಸಿನಲ್ಲಿ ಓದಿಕೊಳ್ಳಿ.
* ಪರೀಕ್ಷಾ ಹಿಂದಿನ ದಿನವೇ ಹಾಲ್ ಟಿಕೆಟ್, ಪೆನ್ನು ಇನ್ನಿತರ ಸಾಮಗ್ರಿಗಳನ್ನ ರೆಡಿ ಮಾಡಿಕೊಳ್ಳಿ
* ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ಮುಂಚಿತವಾಗಿಯೇ ಹೋಗಿ ನಿಮ್ಮ ಪರೀಕ್ಷಾ ಕೇಂದ್ರವನ್ನ ಖಚಿತ ಪಡಿಸಿಕೊಳ್ಳಿ.
* ಪ್ರಶ್ನೆ ಪತ್ರಿಕೆಯನ್ನ ಮೊದಲು 15 ನಿಮಿಷ ಆರಾಮವಾಗಿ ಓದಿ ಅರ್ಥ ಮಾಡಿಕೊಳ್ಳಿ.
* ಮೊದಲು ಸ್ಪಷ್ಟವಾಗಿ ಗೊತ್ತಿರುವ ಉತ್ತರಗಳನ್ನ ಬರೆಯಿರಿ. ಪ್ರತಿ ಪ್ರಶ್ನೆಗೆ ಇಂತಿಷ್ಟೆ ಅವಧಿಯಲ್ಲಿ ಉತ್ತರ ನೀಡುವ ಪ್ಲಾನ್ ಮಾಡಿಕೊಳ್ಳಿ.
* ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಮೇಲೆ ಮತ್ತೊಮ್ಮೆ ಸಂಪೂರ್ಣವಾಗಿ ಗಮನಿಸಿ ಉತ್ತರ ಪತ್ರಿಕೆಯನ್ನ ನೀಡಿ.

ಇಷ್ಟೆಲ್ಲದರ ಮಧ್ಯೆ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದ ಪಿಯುಸಿ ಉಪನ್ಯಾಸಕರು ಪ್ರತಿಭಟನೆ ವಾಪಸ್ ಪಡೆದಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಲು ಕಪ್ಪು ಪಟ್ಟಿ ಧರಿಸಿ ಎಕ್ಸಾಂ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಾರೆ ಈ ಬಾರಿ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆಗೆ ಸಿದ್ದತೆ ನಡೆದಿದೆ.

Comments

Leave a Reply

Your email address will not be published. Required fields are marked *