ಪಬ್ಲಿಕ್ ಟಿವಿ ಇಂಪ್ಯಾಕ್ಟ್- ತೂಗುಸೇತುವೆ ದುರಸ್ತಿ ಮಾಡಿಸಿದ ಜಿಲ್ಲಾಡಳಿತ

ಮಡಿಕೇರಿ: ಕಳೆದ ಬಾರಿ ಸುರಿದ ಭಾರೀ ಮಳೆಗೆ ಮಡಿಕೇರಿಯಲ್ಲಿನ ತೂಗುಸೇತುವೆ ನೆರೆ ಪಾಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿದ್ದು, ಇದೀಗ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

ಹೌದು. ಮಡಿಕೇರಿಯಲ್ಲಿ ಭಾರೀ ಮಳೆಗೆ ತೂಗುಸೇತುವೆ ಹಾನಿಗೊಳಗಾಗಿತ್ತು. ಕಬ್ಬಿಣ ಸಲಾಕೆಗಳು ಕಿತ್ತು ಹೋಗಿ ಸಾವಿನೊಂದಿಗೆ ಸಂಚರಿಸುವಂತ ಪರಿಸ್ಥಿತಿ ಬಂದೊದಗಿತ್ತು. ಕೊಡಗಿನ ಕುಶಾಲನಗರ ಸಮೀಪದ ಕಣಿವೆ ತೂಗುಸೇತುವೆ ಮೈಸೂರು ಮತ್ತು ಕೊಡಗಿಗೆ ಸಂಪರ್ಕ ಕೊಂಡಿಯಾಗಿದ್ದು, ಈ ಸೇತುವೆ ಮೂಲಕವೇ ಪಿರಿಯಾಪಟ್ಟಣದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಪಡೆಯಬೇಕಾಗಿದೆ. ಇದೇ ಸೇತುವೆ ಮೂಲಕ ಪ್ರತಿನಿತ್ಯ ನೂರಾರು ಕಾರ್ಮಿಕರು, ವಿದ್ಯಾರ್ಥಿಗಳು ಓಡಾಡುತ್ತಿದ್ದರು.

ಮಹಾಮಳೆಯಿಂದಾಗಿ ತೂಗುಸೇತುವೆಯ 40 ಸ್ಲ್ಯಾಬ್‍ಗಳು ಕೊಚ್ಚಿ ಹೋಗಿದ್ದವು. ಅಲ್ಲದೆ 100 ಅಡಿಗಳಷ್ಟು ರೈಲಿಂಗ್ಸ್ ಹಾಗೂ ಹ್ಯಾಂಗಿಂಗ್ ರಾಡ್‍ಗಳು ಹಾಳಾಗಿದ್ದವು. ಇಂತಹ ಅಪಾಯಕಾರಿ ಸೇತುವೆ ಮೇಲೆಯೇ ನೂರಾರು ವಿದ್ಯಾರ್ಥಿಗಳು ಓಡಾಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ‘ಸಾವಿನ ನಡಿಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ತೂಗುಸೇತುವೆಯನ್ನು ದುರಸ್ತಿ ಮಾಡಿಸಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

ಈ ಹಿಂದೆ ನೂರಾರು ವಿದ್ಯಾರ್ಥಿಗಳು ಈ ಹಾಳಾಗಿದ್ದ ಸೇತುವೆ ಮೇಲೆ ಜೀವ ಬಿಗಿ ಓಡಾಡುತ್ತಿದ್ದರು. ಪಬ್ಲಿಕ್ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಸೇತುವೆಯನ್ನು ರಿಪೇರಿ ಮಾಡಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ನೆಮ್ಮದಿಯಿಂದ ಓಡಾಡುವಂತಾಗಿದೆ.

Comments

Leave a Reply

Your email address will not be published. Required fields are marked *