PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

ಬೆಂಗಳೂರು: ಬೆಂಗಳೂರಿನ (Bengaluru) ಮೊದಲ ಚಾಲಕ ರಹಿತ ಮೆಟ್ರೋ ರೈಲು (Driverless Metro Train) ಬಂದಿದೆ. ಈ ರೈಲು ಸಂಚಾರಕ್ಕೆ ಸಿದ್ಧತೆ ಭರದಿಂದ ಸಾಗಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ‘ಡ್ರೈವರ್‌ಲೆಸ್‌ ಮೆಟ್ರೋ’ ಸಂಚಾರಕ್ಕಾಗಿ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದೇ ವರ್ಷದ ಡಿಸೆಂಬರ್‌ ಒಳಗೆ ರೈಲು ಸಂಚಾರ ಆರಂಭಿಸಲಿದೆ. ಈ ಚಾಲಕ ರಹಿತ ಮೆಟ್ರೋ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಏನಿದು CBTC-ಸಕ್ರಿಯಗೊಳಿಸಿದ ಚಾಲಕರಹಿತ ಮೆಟ್ರೋ ರೈಲು?
ಭಾರತೀಯ ರೈಲ್ವೇ ಪ್ರಕಾರ, CBTC ತಂತ್ರಜ್ಞಾನವು ಆಧುನಿಕ ಸಂವಹನ ಆಧಾರಿತ ಸಿಸ್ಟಮ್‌ ಆಗಿದೆ. ಸಮಯೋಚಿತ ಮತ್ತು ನಿಖರವಾದ ರೈಲು ನಿಯಂತ್ರಣ ಮಾಹಿತಿಯನ್ನು ವರ್ಗಾಯಿಸಲು ರೇಡಿಯೊ ಸಂವಹನವನ್ನು ಬಳಸುತ್ತದೆ. ಯಾರ ನಿಯಂತ್ರಣವಿಲ್ಲದೇ ರೈಲು ಕಾರ್ಯಾಚರಣೆ ನಡೆಯುತ್ತದೆ. ಬಾಗಿಲು ತೆರೆಯುವುದು ಮತ್ತು ಮುಚ್ಚುವುದು ಮತ್ತು ರೈಲುಗಳ ನಿಲುಗಡೆ ಮತ್ತು ಚಲನೆಯಂತಹ ಕಾರ್ಯ ಸಂಪೂರ್ಣ ಯಾಂತ್ರೀಕರಣವಾಗಿರುತ್ತದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ (OCC) ಮೇಲ್ವಿಚಾರಣೆಯಲ್ಲಿ ರೈಲು ಕಾರ್ಯಾಚರಣೆ ನಡೆಸುತ್ತದೆ. ಇದನ್ನೂ ಓದಿ: ಡ್ರೈವರ್‌ಲೆಸ್ ಮೆಟ್ರೋದ ಫಸ್ಟ್ ಫೋಟೋ ರಿವೀಲ್

ಈ ರೈಲು ತಯಾರಿಸಿದ್ಯಾರು?
ಚಾಲಕ ರಹಿತ ಬೆಂಗಳೂರು ಮೆಟ್ರೋದ ಕೋಚ್‌ಗಳನ್ನು ಮೇಕ್ ಇನ್ ಇಂಡಿಯಾ ಇನಿಶಿಯೇಟಿವ್‌ನ ಭಾಗವಾಗಿ ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಮತ್ತು ಅವರ ದೇಶೀಯ ಪಾಲುದಾರರಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ ತಯಾರಿಸಿದೆ. ಚೀನಾದ ಸಂಸ್ಥೆಯು 2019 ರಲ್ಲಿ BMRCLಗೆ 216 ಕೋಚ್‌ಗಳನ್ನು ಪೂರೈಸಲು 1,578 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು.

ರೈಲು ಹೇಗೆ ಕಾರ್ಯನಿರ್ವಹಿಸುತ್ತೆ?
ಪ್ರತಿದಿನ ಬೆಳಗ್ಗೆ OCC (ಕಾರ್ಯಾಚರಣೆ ನಿಯಂತ್ರಣ ಕೇಂದ್ರ)ಯ ಸಂದೇಶಕ್ಕೆ ರೈಲು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಮೆಟ್ರೋ ಲೈಟ್‌ಗಳು ಆನ್‌ ಆಗಿ, ಎಂಜಿನ್ ಅನ್ನು ಪ್ರಾರಂಭಿಸುತ್ತದೆ. ನಂತರ ರೈಲು ತನ್ನ ತಾಂತ್ರಿಕ ಫಿಟ್ನೆಸ್ ಅನ್ನು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸ್ವಯಂ-ಪರಿಶೀಲನೆಗೆ ಒಳಗಾಗುತ್ತದೆ. ಇದು ಪ್ಲಾಟ್‌ಫಾರ್ಮ್‌ಗಳಿಗೆ ತೆರಳುವ ಮೊದಲು ಸ್ವಯಂಚಾಲಿತ ಸ್ವಚ್ಛತೆಗೆ ಒಳಗಾಗುತ್ತದೆ. ಸಂಚಾರ ಮುಗಿದ ಮೇಲೆ ರಾತ್ರಿಗೆ ರೈಲು ‘ಸ್ಲೀಪ್ ಮೋಡ್’ಗೆ ಹೋಗುತ್ತದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ BMRCL ನಿಂದ ಗುಡ್‌ನ್ಯೂಸ್‌

ಟ್ರ್ಯಾಕ್‌ ಮಾನಿಟರಿಂಗ್‌ ಇರುವ ದೇಶದ ಮೊದಲ ರೈಲು?
ರೈಲು ಸಂಚಾರ ಸುರಕ್ಷತೆ ದೃಷ್ಟಿಯಿಂದ ಟ್ರ್ಯಾಕ್‌ ಮಾನಿಟರಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ. ಟ್ರ್ಯಾಕ್‌ ಮೇಲ್ವಿಚಾರಣೆಗೆ ಎಐ (ಕೃತಕ ಬುದ್ದಿಮತ್ತೆ) ಬಳಸಿಕೊಳ್ಳಲಾಗುತ್ತದೆ. ರೈಲು ಸಂಚಾರದ ಪ್ರತಿ ಹಂತದಲ್ಲೂ ಟ್ರ್ಯಾಕ್‌ನಲ್ಲಿ ಎಲ್ಲವೂ ರೆಕಾರ್ಡ್‌ ಆಗಲಿದೆ. ಏನಾದರು ವ್ಯತ್ಯಯ ಉಂಟಾದರೆ ಒಸಿಸಿಗೆ ಸಂದೇಶ ರವಾನೆಯಾಗುತ್ತದೆ. ಈ ವ್ಯವಸ್ಥೆ ಹೊಂದಿದ ದೇಶದ ಮೊದಲ ರೈಲು ಇದಾಗಿದೆ. ರೈಲುಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ದೃಶ್ಯ ಡೇಟಾವನ್ನು ಸಂಗ್ರಹಿಸುತ್ತವೆ. ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ.

ರೈಲಿನ ಇತರ ವಿಶೇಷತೆಗಳೇನು?
ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ: ಇದು ರೈಲು ಮಾನಿಟರಿಂಗ್ ಸಿಸ್ಟಮ್ ಆಗಿದೆ. ಅದು ರೈಲುಗಳ ಬೇರಿಂಗ್‌ಗಳಲ್ಲಿ ಅಧಿಕ ಬಿಸಿಯಾಗುವುದನ್ನು ಪತ್ತೆ ಮಾಡುತ್ತದೆ. ಗೊತ್ತುಪಡಿಸಿದ ನಿಲ್ದಾಣಗಳಲ್ಲಿ ಆನ್‌ಬೋರ್ಡ್ ಆಂಟೆನಾ, ವೇಸೈಡ್ ವೈರ್‌ಲೆಸ್ ಉಪಕರಣಗಳು ಮತ್ತು ಟೆಲಿಕಾಂ ನೆಟ್‌ವರ್ಕ್ ಮೂಲಕ ತಾಪಮಾನದ ಡೇಟಾವನ್ನು OCC ಗೆ ರವಾನಿಸಲಾಗುತ್ತದೆ. ಇದನ್ನೂ ಓದಿ: ನಮ್ಮ ಮೆಟ್ರೋಗೆ ಎಂಟ್ರಿ ಕೊಟ್ಟ ‘ಕರಿಮಣಿ ಮಾಲೀಕ’ ಹಾಡು

ರಿಯಲ್‌ ಟೈಮ್‌ ಲೊಕೇಷನ್: ಚಾಲಕರಹಿತ ರೈಲು LCD- ಮಾದರಿಯ ಡೈನಾಮಿಕ್ ಮಾರ್ಗ ನಕ್ಷೆಯನ್ನು ಹೊಂದಿದೆ. ಇದು ಬಾಗಿಲು ತೆರೆಯುವ ಅಥವಾ ಮುಚ್ಚುವ ಮತ್ತು ಆಗಮನ/ನಿರ್ಗಮನದ ಮಾಹಿತಿಯನ್ನು ಒದಗಿಸುತ್ತದೆ.

ಫ್ರಂಟ್ ವ್ಯೂ ಮತ್ತು ರಿಯರ್ ವ್ಯೂ ಕ್ಯಾಮೆರಾ: ರಿಯರ್ ವ್ಯೂ ಕ್ಯಾಮೆರಾಗಳು ರೈಲಿನ ಎರಡೂ ಬದಿಗಳಲ್ಲಿರುತ್ತವೆ. ಇದರಿಂದ ರೈಲು ನಿರ್ವಾಹಕರು ರೈಲು ನಿರ್ಗಮಿಸುವ ಮೊದಲು ಪ್ರಯಾಣಿಕರು ಹತ್ತುವುದನ್ನು ಮತ್ತು ಇಳಿಯುವುದನ್ನು ವೀಕ್ಷಿಸಬಹುದು.

ಚಾಲಕ ರಹಿತ ರೈಲಿನ ಮುಂಭಾಗವನ್ನು ಲಾಲ್‌ಬಾಗ್‌ ಗಾಜಿನ ಮನೆ ಕಮಾನು, ಗಂಡಭೇರುಂಡದ ಕಾಲ ಭಾಗದ ರೆಕ್ಕೆ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗ್ಯಾಂಗ್‌ವೇ (2 ಬೋಗಿಗಳು ಸೇರುವ ಸ್ಥಳ) ವಿನ್ಯಾಸವನ್ನು ಡ್ರಮ್‌ ಮಾದರಿಯಲ್ಲಿ ಮಾಡಲಾಗಿದೆ. ಇದರಿಂದ ರೈಲು ತಿರುವುಗಳಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಾಗುತ್ತದೆ.

ರೈಲಿನಲ್ಲಿ ಬೆಂಕಿ ಅಥವಾ ಹೊಗೆ ಕಾಣಿಸಿಕೊಂಡರೆ ತಕ್ಷಣ ಒಸಿಸಿಗೆ ಸಂದೇಶ ರವಾನೆಯಾಗುತ್ತದೆ. ಆಗ ಮುಂದಿನ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತದೆ. ಎಲ್‌ಸಿಡಿ ಪರದೆ ಮೂಲಕ ನಿಲ್ದಾಣಗಳ ಮಾರ್ಗಸೂಚಿ ನೀಡಲಾಗಿದೆ. ಜಾಹೀರಾತಿಗೆ ವಿಶೇಷ ಎಲ್‌ಇಡಿ ಪರದೆ ನೀಡಲಾಗಿದೆ. ಮ್ಯಾನುವಲ್‌ ಜಾಹೀರಾತು ವ್ಯವಸ್ಥೆಯೂ ಇದೆ. ಇದನ್ನೂ ಓದಿ: ಭಾರತದ ಮೊದಲ ನೀರೊಳಗಿನ ಮೆಟ್ರೋ ಉದ್ಘಾಟನೆ – ನಾಳೆ ಪ್ರಧಾನಿ ಮೋದಿ ಚಾಲನೆ

ಎಮರ್ಜೆನ್ಸಿ ಎಗ್ರೆಸ್‌ ಡಿವೈಸ್ (ಇಇಡಿ): ಹ್ಯಾಂಡಲ್‌ ನವೀರಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪ್ರಯಾಣಿಕ ಇದನ್ನು ಎಳೆದರೆ, ಸಂದೇಶ ಒಸಿಸಿಯಲ್ಲಿನ ರೈಲು ನಿರ್ವಾಹಕರಿಗೆ ರವಾನೆಯಾಗುತ್ತದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಸ್ಥಿತಿ ಅವಲೋಕಿಸಿ ಬಾಗಿಲು ತೆರೆಯಲಾಗುತ್ತದೆ.

ರೈಲು ಸಂಚಾರ ಆರಂಭಕ್ಕೂ ಮುನ್ನ 37 ಪರೀಕ್ಷೆ?
ಹೊಸ ರೋಲಿಂಗ್‌ ಸ್ಟಾಕ್‌ (ಬೋಗಿಗಳು) ಆಗಿರುವುದರಿಂದ ಹಲವು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಹೆಬ್ಬಗೋಡಿ ಡಿಪೋದಲ್ಲಿ ಮಾದರಿ ರೈಲಿನ ಪರೀಕ್ಷೆ ಆರಂಭವಾಗಲಿದೆ. ಮೂರರಿಂದ ನಾಲ್ಕು ದಿನಗಳ ಸ್ಥಿರ ಪರೀಕ್ಷೆಯ ನಂತರ, ರೈಲು ಮುಖ್ಯ ಮಾರ್ಗದಲ್ಲಿ ಪರೀಕ್ಷೆಗಳಿಗೆ ಒಳಗಾಗುತ್ತದೆ. ರೈಲು 4 ತಿಂಗಳಲ್ಲಿ 37 ಕ್ಕೂ ಹೆಚ್ಚು ಪರೀಕ್ಷೆಗಳಿಗೆ ಒಳಗಾಗಲಿದೆ. ಬಳಿಕ 45 ದಿನಗಳವರೆಗೆ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯೊಂದಿಗೆ ಸಿಸ್ಟಮ್ ಏಕೀಕರಣ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ರಿಸರ್ಚ್‌ ಡಿಸೈನ್‌ & ಸ್ಟ್ಯಾಂಡರ್ಡ್‌ ಆರ್ಗನೈಸೇಷನ್‌ (ಆರ್‌ಡಿಎಸ್‌ಒ) ಮೂಲಕ ಆಸಿಲೇಶನ್‌ ಟ್ರಯಲ್ಸ್‌ & ಕಮಿಷನರ್‌ ಆಫ್‌ ಮೆಟ್ರೋ ರೈಲ್‌ ಸೇಫ್ಟಿ (ಸಿಎಂಆರ್‌ಸಿ) ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಿದೆ ಎಂದು ಹೆಬ್ಬಗೋಡಿ ಡಿಪೋ ಯೋಜನಾ ವ್ಯವಸ್ಥಾಪಕ ಜಿತೇಂದ್ರ ಝಾ ತಿಳಿಸಿದ್ದಾರೆ.

ಇದು ನಿಜಕ್ಕೂ ಚಾಲಕ ರಹಿತ ರೈಲೇ?
ಹೌದು, ಇದು ಚಾಲಕ ರಹಿತ ರೈಲು. ಆದರೆ ಆರಂಭದಲ್ಲಿ ಚಾಲಕರಿಂದಲೇ ಓಡಿಸಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ಕನಿಷ್ಠ 6 ತಿಂಗಳ ವರೆಗೆ ಚಾಲಕರಿಂದಲೇ (ಲೊಕೊ ಪೈಲಟ್‌ಗಳು) ಓಡುತ್ತದೆ. ಯಾವುದೇ ಸಮಸ್ಯೆ ಇಲ್ಲ ಎಂಬುದು ಖಾತ್ರಿಯಾದ ಮೇಲೆ ಚಾಲಕ ರಹಿತ ಕಾರ್ಯಾಚರಣೆ ನಡೆಸಲಿದೆ. ವಾಣಿಜ್ಯ ಸಂಚಾರಕ್ಕೆ ಕನಿಷ್ಠ 7 ರೈಲುಗಳು ಬೇಕಾಗುತ್ತವೆ. ಈ ವರ್ಷದ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಇಷ್ಟು ರೈಲುಗಳು ಸೇರುವ ನಿರೀಕ್ಷೆ ಇದೆ. 7 ರೈಲುಗಳು ಬಂದಲ್ಲಿ 15 ನಿಮಿಷಕ್ಕೊಮ್ಮೆ ಒಂದು ರೈಲು ಓಡಿಸಬಹುದು. ಇದನ್ನೂ ಓದಿ: ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ; ಆಗ್ರಾ ಮೆಟ್ರೋ ಕಾರಿಡಾರ್ ಉದ್ಘಾಟಿಸಿದ ಮೋದಿ

ರೈಲು ಸಂಚಾರ ಯಾವಾಗಿನಿಂದ?
ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ನಿರ್ಮಾಣ ಹಂತದಲ್ಲಿರುವ ಹಳದಿ ಮೆಟ್ರೋ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಈ ವರ್ಷದ ಡಿಸೆಂಬರ್‌ ಒಳಗೆ ಆರಂಭವಾಗಲಿದೆ. ಹಳದಿ ಮಾರ್ಗದ ರೈಲು ಸಂಚಾರದ ಸಿಗ್ನಲಿಂಗ್‌ ಪರೀಕ್ಷೆಗೆ ಕನಿಷ್ಠ 2 ರೈಲುಗಳು ಬೇಕು. ಸದಸ್ಯ ಚೀನಾದ ಸಿಆರ್‌ಆರ್‌ಸಿ ನಿರ್ಮಿಸಿ ಕಳುಹಿಸಿರುವ ಒಂದು ರೈಲು ಮಾತ್ರ ಬೆಂಗಳೂರಲ್ಲಿ ಇದೆ. ಮುಂದಿನ ಜೂನ್-ಜುಲೈ ವೇಳೆಗೆ ಪಶ್ಚಿಮ ಬಂಗಾಳದ ತಿತಾಘರ್‌ ಕಂಪನಿಯಿಂದ 2 ರೈಲುಗಳು ಬರಲಿವೆ. ಚೀನಾದಿಂದಲೂ ಇನ್ನೊಂದು ಸೆಟ್‌ ರೈಲು ಬರಬೇಕಿದೆ. ತಿತಾಘರ್‌ ರೈಲು ಪೂರೈಸುತ್ತಿದ್ದಂತೆಯೇ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಏನಿದು ಹಳದಿ ಮಾರ್ಗ?
18.82 ಕಿ.ಮೀ ಉದ್ದದ ನಿರ್ಮಾಣ ಹಂತದಲ್ಲಿರುವ ಹಳದಿ ಮೆಟ್ರೋ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುತ್ತದೆ. ಇದು 16 ನಿಲ್ದಾಣಗಳನ್ನು ಹೊಂದಿರುವ ಎತ್ತರದ ಮೆಟ್ರೋ ಮಾರ್ಗವಾಗಿದೆ. ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್‌ ರಸ್ತೆ, ಇನ್ಫೋಸಿಸ್‌ ಫೌಂಡೇಷನ್‌ (ಕೋಣಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್‌ ಸಿಟಿ, ಬಿರಿಟೆನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ಮತ್ತು ಆರ್‌.ವಿ.ರಸ್ತೆ ಸೇರಿ ಒಟ್ಟು 16 ನಿಲ್ದಾಣಗಳಿವೆ. ಆರ್‌.ವಿ.ರಸ್ತೆಯಲ್ಲಿ ಹಸಿರು ಮಾರ್ಗವನ್ನು ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಗುಲಾಬಿ ಮಾರ್ಗವನ್ನು ಹಳದಿ ಮಾರ್ಗವು ಸಂಪರ್ಕಿಸಲಿದೆ.