ಹೈಟೆಕ್ ಚಿಕಿತ್ಸೆಗೆ ಮಾದರಿಯಾಗಿರೋ ಕೋಲಾರ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ

ಕೋಲಾರ: ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಅಂದರೆ ದೂರ ಉಳಿಯುವ ರೋಗಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಆದರೆ ಕೋಲಾರ ಜಿಲ್ಲೆಯ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ರೋಗಿಗಳನ್ನು ಸೆಳೆಯುತ್ತಿದೆ.

ವರ್ಷದ ಹಿಂದೆ ಸದಾ ಗಬ್ಬುನಾರುತ್ತಿದ್ದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜನ ಹಿಂದೆ ಸರಿಯುತ್ತಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು, ವೈದ್ಯರ ಪರಿಶ್ರಮದ ಫಲವಾಗಿ ಸರ್ಕಾರಿ ಆಸ್ಪತ್ರೆಯನ್ನು ಯಾವ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲ ಎಂಬಂತೆ ಮಾಡಿ ತೋರಿಸಿದ್ದಾರೆ.

ರೋಗಿಗಳಿಗೆ ಉಚಿತ ಡಿಜಿಟಲ್ ಎಕ್ಸ್ ರೇ, ಉಚಿತ ರಕ್ತ ಪರೀಕ್ಷೆ, 24 ಗಂಟೆ ಉಚಿತ ಡಯಾಲಿಸೀಸ್, ಉಚಿತ ಎಂ.ಆರ್.ಐ, ಸ್ಕ್ಯಾನಿಂಗ್, ಸಿ.ಟಿ ಸ್ಕ್ಯಾನಿಂಗ್, ರಕ್ತ ವಿಧಳನಾ ಘಟಕ, ಹಾಗೂ ಗ್ರೀನ್ ಲೇಸರ್ ರೆಟಿನಾ ಚಿಕಿತ್ಸೆ, ರೋಗಿಗಳಿಗೆ ಸುಸಜ್ಜಿತ ಬೆಡ್‍ಗಳು ಸೇರಿದಂತೆ ಅವಶ್ಯಕವಾದ ಎಲ್ಲಾ ಸೇವೆಗಳನ್ನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಜೊತೆಗೆ ಹೊರ ರೋಗಿಗಳ ಸಂಖ್ಯೆ 1200 ರಿಂದ 1500ಕ್ಕೇರಿದೆ.

ವಿಪರ್ಯಾಸ ಅಂದ್ರೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ, ಸಿಸಿಟಿವಿ ಕ್ಯಾಮೆರಾ ಕೊರತೆ ಇದೆ. ಇದರ ಪರಿಣಾಮವಾಗಿ ನವಜಾತ ಶಿಶುಗಳ ನಾಪತ್ತೆ, ಆಸ್ಪತ್ರೆಯಲ್ಲಿ ಗಲಾಟೆ ಸೇರಿದಂತೆ ಹಲವು ದುರ್ಘಟನೆಗಳಿಗೆ ಕಾರಣವಾಗಿದೆ ಹಾಗಾಗಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಲ್ಲಿ ಭಯ ಮನೆ ಮಾಡಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ನೀಡುವುದರ ಮೂಲಕ ಮಾದರಿ ಆಸ್ಪತ್ರೆಯಾಗಿರುವ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ರೋಗಿಗಳ ಭದ್ರತೆಗಾಗಿ ಹೊರ ಪೊಲೀಸ್ ಠಾಣೆ, ಹೋಂ ಗಾರ್ಡ್‍ಗಳ ನೇಮಕ, ಸಿಸಿ ಟಿವಿಗಳನ್ನ ಅಳವಡಿಕೆಯ ಅನಿವಾರ್ಯತೆ ಈ ಆಸ್ಪತ್ರೆಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿರುವ ಈ ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ, ಹಾಗೂ ಭದ್ರತೆ ನಿಯೋಜಿಸುವ ಕೆಲಸವಾಗಬೇಕಿದೆ.

https://youtu.be/ipVNIalXQ9M

Comments

Leave a Reply

Your email address will not be published. Required fields are marked *