ವಿವಿಐಪಿಗಳಿಗೆ ಹೋಗಿಲ್ಲ ಪ್ಲಾಸ್ಟಿಕ್ ಮೇಲಿನ ವ್ಯಾಮೋಹ

ಬೆಂಗಳೂರು: ಪರಿಸರ ಮಾಲಿನ್ಯದ ಕಾರಣಕ್ಕೆ ಪ್ಲಾಸ್ಟಿಕ್ ಬಳಸಬಾರದು,ಬ್ಯಾನ್ ಆಗಿದೆ. ಹೀಗಾಗಿಯೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧಾಕರ್ ಮಾಲ್‍ಗಳಿಗೆ ಹೋಗಿ ದಾಳಿ ಮಾಡಿದ್ದರು. ಇತ್ತ ಮೇಯರ್ ಗಂಗಾಂಬಿಕೆ ಅವರು ಪ್ಲಾಸ್ಟಿಕ್ ಬಳಸಿದೆ ಎಂದು ಫೈನ್ ಕೂಡ ಕಟ್ಟಿದ್ದರು. ಇದೀಗ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಪ್ಲಾಸ್ಟಿಕ್ ಬಳಕೆ ಮಾಡಿರುವುದು ಬಯಲಾಗಿದೆ.

ರಿಯಾಲಿಟಿ ಚೆಕ್ 1
ಸ್ಥಳ- ಶಕ್ತಿ ಸೌಧ
ವಿಧಾನಸೌಧದಲ್ಲಿ ಪ್ಲಾಸ್ಟಿಕ್ ಕಾರುಬಾರು ಜೋರಾಗಿದೆ. ಇಲ್ಲಿ ಸಿಬ್ಬಂದಿ, ವಿಧಾನಸೌಧ ವಿಸಿಟರ್ಸ್‍ಗಳು ಪ್ಲಾಸ್ಟಿಕ್ ಹಿಡಿದು ನಿರಾಯಾಸವಾಗಿ ಹೋಗಿ ಬರುತ್ತಾರೆ. ಹೀಗಾಗಿ ಶಕ್ತಿ ಶೌಧಕ್ಕೆ ಪ್ಲಾಸ್ಟಿಕ್ ಬ್ಯಾನ್ ನಿಯಮ ಅನ್ವಯಿಸುವುದಿಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

ಸ್ಥಳ – ಶಾಸಕರ ಭವನ
ಶಾಸಕರ ಭವನಕ್ಕೆ ಬಂದು ಹೋಗುವವರು ತ್ಯಾಜ್ಯ ಹಾಕಲು ಬಕೆಟ್ ಇದೆ. ಆದರೂ ಪ್ಲಾಸ್ಟಿಕ್ ದರ್ಬಾರ್ ಜೋರಾಗಿದೆ. ಭವನಕ್ಕೆ ಬಂದು ಹೋಗುವವರಂತೂ ಪ್ಲಾಸ್ಟಿಕ್ ತಂದು ಹಾಕಿ ಹೋಗುತ್ತಾರೆ.

ಸ್ಥಳ: ಎಂಎಸ್ ಬಿಲ್ಡಿಂಗ್
ಪ್ಲಾಸ್ಟಿಕ್ ನಿಷೇಧ ಜಾರಿಗೆ ತರುವುದು ಅಧಿಕಾರಿಗಳ ಕೈಯಲ್ಲೇ ಇರುತ್ತದೆ. ಹೀಗಿರುವಾಗ ಅಧಿಕಾರಿಗಳೇ ತುಂಬಿರುವ ಎಂ.ಎಸ್ ಬಿಲ್ಡಿಂಗ್ ಸಹ ಪ್ಲಾಸ್ಟಿಕ್ ನಿಂದ ಮುಕ್ತವಾಗಿಲ್ಲ.

ಸ್ಥಳ: ಪಾಲಿಕೆ
ಪ್ಲಾಸ್ಟಿಕ್ ವಿರುದ್ಧ ಸಮರ ಸಾರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆವರಣದಲ್ಲಿಯೇ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ರಿಯಾಲಿಟ್ ಚೆಕ್ ವೇಳೆ ಬೆಳಕಿಗೆ ಬಂದಿದೆ. ಹೀಗಿರುವಾಗ ತಾವೇ ಪ್ಲಾಸ್ಟಿಕ್ ಬಳಕೆ ಮಾಡಿ ಇನ್ನೊಬ್ಬರಿಗೆ ಫೈನ್ ಹಾಕುವುದು ಎಷ್ಟು ಸರಿ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಸ್ಥಳ – ಸಚಿವರ ಕಚೇರಿಗಳು
ಅಧಿಕಾರಿಗಳಷ್ಟೇ ಅಲ್ಲ ಸಚಿವರು ಕೂಡ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಕಂಡುಬಂದಿದೆ. ಜಗದೀಶ್ ಶೆಟ್ಟರ್, ಸಿ.ಟಿ ರವಿ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಬಸವರಾಜ್ ಬೊಮ್ಮಾಯಿ ಕಚೇರಿಗಳು ಕೂಡ ಪ್ಲಾಸ್ಟಿಕ್ ಮಯವಾಗಿವೆ.

ಬಿಜೆಪಿ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ನೂತನ ಸಚಿವರು ಕಚೇರಿಗಳ ಪೂಜೆ ಮಾಡಿದರು. ಈ ವೇಳೆ ಪ್ಲಾಸ್ಟಿಕ್ ಗಳನ್ನು ಬಳಕೆ ಮಾಡಲಾಗಿತ್ತು. ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ತಮ್ಮ ಕಚೇರಿ ಪೂಜೆ ಮಾಡಿದ್ದರು. ಆಗ ಬರೀ ಪ್ಲಾಸ್ಟಿಕ್ ನದ್ದೇ ದರ್ಬಾರ್ ಕಾಣಿಸಿತ್ತು. ಗನ್ ಮ್ಯಾನ್, ಡ್ರೈವರ್, ಹಿಂಬಾಲಕರು ಅಲ್ಲದೆ ಕೆಲ ಅಧಿಕಾರಿಗಳು ಹೂಗುಚ್ಛ ನೀಡುವಾಗ ಬರೀ ಪ್ಲಾಸ್ಟಿಕ್ ತುಂಬಿಕೊಂಡಿತ್ತು. ಪ್ಲಾಸ್ಟಿಕ್ ಬೊಕ್ಕೆ ಪಡೆದ ಶೆಟ್ಟರ್‍ಗೆ ಫೈನ್ ಹಾಕ್ತಿರಾ ಅಥವಾ ಕೊಟ್ಟವರಿಗೆ ಫೈನ್ ಹಾಕ್ತಿರಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ.

ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಕಚೇರಿ ಮತ್ತು ಬಸವರಾಜ್ ಬೊಮ್ಮಾಯಿ ಕಚೇರಿಗಳ ಮುಂದೆಯೇ ಹೂವಿನ ಬೊಕ್ಕೆ ರೂಪದಲ್ಲಿ ಪ್ಲಾಸ್ಟಿಕ್‍ಗಳು ರಾಶಿ ರಾಶಿ ಬಿದ್ದಿರುತ್ತವೆ. ಸಿಟಿ ರವಿ ಕಚೇರಿಯಲ್ಲೂ ಪ್ಲಾಸ್ಟಿಕ್ ಬಳಕೆಯಾಗಿದ್ದು, ಪ್ಲಾಸ್ಟಿಕ್ ಮುಕ್ತ ಮಾಡಬೇಕೆಂಬ ಪಾಲಿಕೆ ಕನಸು ಕನಸಾಗಿಯೇ ಇರುತ್ತಾ ಅನ್ನೋ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *