ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವಿದ್ಯಾರ್ಥಿನಿಗೆ 50 ಸಾವಿರ ಹಣ ವಾಪಸ್ ನೀಡಿದ ಖಾಸಗಿ ವಿದ್ಯಾ ಸಂಸ್ಥೆ

ಚಿಕ್ಕಮಗಳೂರು: ನಾನಾ ರೀತಿಯ ಆಫರ್ ನೀಡಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಬರುವ ಆರು ತಿಂಗಳ ಮೊದಲೇ ಮುಂಗಡವಾಗಿ 50 ಸಾವಿರ ಹಣ ಕಟ್ಟಿಸಿಕೊಂಡಿದ್ದ ಖಾಸಗಿ ವಿದ್ಯಾ ಸಂಸ್ಥೆ 10ನೇ ತರಗತಿ ಫಲಿತಾಂಶ ಪ್ರಕಟವಾದ ಬಳಿಕ ಬೇರೆ ರೀತಿಯ ಆಫರ್ ನೀಡಿ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಖಾಸಗಿ ವಿದ್ಯಾ ಸಂಸ್ಥೆ 50 ಸಾವಿರ ಹಣವನ್ನು ಚೆಕ್ ರೂಪದಲ್ಲಿ ವಾಪಸ್ ನೀಡಿದೆ.

ತಾಲೂಕಿನ ಆಲ್ದೂರಿನ ಪೂರ್ಣಪ್ರಜ್ಞಾ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ರಚಿತಾ ಎಂ.ಗೌಡಗೆ ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಖಾಸಗಿ ವಿದ್ಯಾ ಸಂಸ್ಥೆ ಮುಂದಿನ ವಿದ್ಯಾಭ್ಯಾಸಕ್ಕೆ ಆಫರ್ ನೀಡಿತ್ತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90% ಮಾರ್ಕ್ಸ್ ಬಂದರೆ 25 ಸಾವಿರ ಡಿಸ್ಕೌಂಟ್, 95% ಬಂದರೆ 50 ಸಾವಿರ ಡಿಸ್ಕೌಂಟ್, ಎಬೋವ್ 95% ಬಂದರೆ 75 ಸಾವಿರ ಡಿಸ್ಕೌಂಟ್, 100% ಬಂದರೆ ಒಂದು ಲಕ್ಷ ಡಿಸ್ಕೌಂಟ್ ಎಂದು ಆಫರ್ ನೀಡಿತ್ತು. ರಚಿತಾ ನನ್ನದು 95% ಬರುತ್ತೆ. ಭವಿಷ್ಯದಲ್ಲಿ ಅನುಕೂಲವಾಗಲಿ ಎಂದು ಡಿಸೆಂಬರ್‌ನಲ್ಲೇ 50 ಸಾವಿರ ಮುಂಗಡ ಹಣ ನೀಡಿ ಅಡ್ಮಿಷನ್ ಆಗಿದ್ದರು. ಆದರೆ 10ನೇ ತರಗತಿಯಲ್ಲಿ ರಚಿತಾ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದಿದ್ದಾಳೆ. ಇದನ್ನೂ ಓದಿ: ಸಂಜೆ 7 ರಿಂದ ಬೆಳಗ್ಗೆ 6 ರವರೆಗೆ ಮಹಿಳೆ ಉದ್ಯೋಗಿಗಳನ್ನು ದುಡಿಸುವಂತಿಲ್ಲ: ಯೋಗಿ ಆದೇಶ

ಫಲಿತಾಂಶ ಪ್ರಕಟದ ಬಳಿಕ ಕಾಲೇಜ್ ಆಡಳಿತ ಮಂಡಳಿ ಸೀಟು-ಹಣ ಎರಡೂ ಇಲ್ಲ. ಸೀಟು ಬೇಕಾದರೆ 2 ಲಕ್ಷದ 25 ಸಾವಿರ ಹಣ ಪೂರ್ತಿ ಕಟ್ಟಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಕಟ್ಟಿದ 50 ಸಾವಿರ ಹಣವೂ ವಾಪಸ್ ಬರೋದಿಲ್ಲ ಎಂದಿದ್ದರು ಎಂದು ರಚಿತಾ ತಾಯಿ ಪುಷ್ಪ ಆರೋಪಿಸಿದ್ದರು. ಮುಂಗಡವಾಗಿ ಕಟ್ಟಿದ 50 ಸಾವಿರ ಹಣವನ್ನು ಪಿಯುಸಿಯಲ್ಲಿ ಔಟ್ ಆಫ್ ಔಟ್ ಅಥವಾ ಪಿಯುಸಿಯ ನೀಟ್ ಪರೀಕ್ಷೆಯಲ್ಲಿ ಅವರ ರ್‍ಯಾಕಿಂಗ್ ಆಧಾರದ ಮೇಲೆ ಸ್ಕಾಲರ್‌ಶಿಪ್ ಕೊಡುತ್ತೇವೆ ಎಂದು ಹೇಳಿದ್ದರಂತೆ. ಅಂದು ಒಂದು ರೀತಿ ಹೇಳಿ ಅಡ್ಮಿಷನ್ ಮಾಡಿಸಿಕೊಂಡು ಈಗ ಮತ್ತೊಂದು ರೀತಿ ಹೇಳುತ್ತಿದ್ದಾರೆ. ನಮ್ಮ ಹಣ ವಾಪಸ್ ನೀಡಿ ನಾವೇ ಬೇರೆ ಕಾಲೇಜ್‍ಗೆ ಸೇರುತ್ತೇವೆ ಎಂದರೂ ಹಣ ನೀಡುತ್ತಿಲ್ಲ ಎಂದು ರಚಿತಾ ತಾಯಿ ಪುಷ್ಪ ಹೇಳಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು. ಇದನ್ನೂ ಓದಿ: ಅಪ್ರಾಪ್ತ ಬಾಲಕ ವಾಹನ ಸವಾರಿ – ಮಾಲೀಕನಿಗೆ ಬಿತ್ತು ಭಾರೀ ದಂಡ

ಸುದ್ದಿ ಬಿತ್ತರವಾಗುತ್ತಿದ್ದಂತೆ ಖಾಸಗಿ ಪಿಯು ಕಾಲೇಜ್‍ನ ಆಡಳಿತ ಸಿಬ್ಬಂದಿ ಮುಂಗಡವಾಗಿ ಕಟ್ಟಿಸಿಕೊಂಡಿದ್ದ 50 ಸಾವಿರ ರೂ. ಹಣವನ್ನು ಚೆಕ್ ರೂಪದಲ್ಲಿ ರಚಿತಾಗೆ ವಾಪಸ್ ನೀಡಿದ್ದಾರೆ. ಈ ಕುರಿತಂತೆ ರಚಿತಾ ತಾಯಿ ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *