ಪಬ್ಲಿಕ್‌ ಟಿವಿಗೆ 12 ರ ಸಂಭ್ರಮ – Photo Gallery

ನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ‘ಪಬ್ಲಿಕ್‌ ಟಿವಿ’ಯ 12ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ 6 ರ ಸಂಭ್ರಮ. ಈ ಅಮೂಲ್ಯ ಕ್ಷಣವನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ ಇಂದು (ಸೋಮವಾರ) ಬೆಂಗಳೂರಿನ ಕಚೇರಿಯಲ್ಲಿ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಲಾಯಿತು.

ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ನವರತ್ನಗಳನ್ನು ಸನ್ಮಾನಿಸಲಾಯಿತು. ಈ ಸಾಧಕರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಸನ್ಮಾನಿಸಿದರು. ಇದೇ ವೇಳೆ, ಪಬ್ಲಿಕ್‌ ಟಿವಿ ಸಿಇಒ ಅರುಣ್, ಸಿಓಓ ಸಿ.ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾಗಲು ಕಾನೂನಾತ್ಮಕ ಗೆಲುವಿಗೆ ಮೊದಲ ಅಡಿಪಾಯ ಹಾಕಿದ ಹೆಮ್ಮೆಯ ಕನ್ನಡಿಗ, ಹಿರಿಯ ನ್ಯಾಯವಾದಿ ಕೆ.ಎನ್.ಭಟ್‌. ದೇಶದೆಲ್ಲೆಡೆ ಸುತ್ತಿ, ಶ್ರೀರಾಮ ಜನಿಸಿದ ಅಯೋಧ್ಯೆ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಭಗವಾನ್‌ ಶ್ರೀರಾಮನ ಪರ ವಾದ ಮಂಡಿಸಿದ್ದರು. ಅಯೋಧ್ಯೆಯೇ ಶ್ರೀರಾಮ ಜನ್ಮಸ್ಥಾನ ಎಂದು ಕಾನೂನಾತ್ಮಕವಾಗಿ ಜಯ ಸಿಕ್ಕಲು ಇದೇ ಮೊದಲ ಮೆಟ್ಟಿಲಾಯಿತು. ಸಾಧಕ ಕೆ.ಎನ್.ಭಟ್‌ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

ಕೋಟಿ ಕೋಟಿ ರಾಮಭಕ್ತರು ಬಯಸಿದ, ಕಾತರಿಸಿದ ಕ್ಷಣವೆಂದರೆ ಬಾಲಕರಾಮನ ವಿಗ್ರಹವನ್ನು ಕಣ್ತುಂಬಿಕೊಳ್ಳುವುದು. ಕನ್ನಡಿಗನ ಕೈಯಲ್ಲರಳಿದ ಬಾಲಕರಾಮನೇ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಆ ಮೂರ್ತಿ ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌. ಇವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಗೌರವಿಸಲಾಯಿತು.

ಅಯೋಧ್ಯೆ ಬಾಲರಾಮನ ವಿಗ್ರಹ ಸಾಕ್ಷಾತ್ಕಾರಕ್ಕೆ ಮೈಸೂರಿನ ಹಾರೋಹಳ್ಳಿಯ ರಾಮದಾಸ್‌ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆ ಕಾರಣ. ಶಿಲೆ ಸಿಕ್ಕ ಜಮೀನನ್ನು ರಾಮಮಂದಿರ ನಿರ್ಮಾಣಕ್ಕೆ ರಾಮದಾಸ್‌ ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಅಭಿನಂದಿಸಲಾಯಿತು.

ರಾಮಲಲ್ಲಾ ಮೂರ್ತಿ ಕೆತ್ತಲು ಇಡೀ ದೇಶದಲ್ಲಿ ಕೇವಲ 3 ಶಿಲ್ಪಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರಲ್ಲಿ ಇಡಗುಂಜಿ ಮೂಲದ ಗಣೇಶ್‌ ಭಟ್‌ ಅಪೂರ್ವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇವರ ಕೈಯಲ್ಲೂ ರಾಮಲಲ್ಲಾ ಸುಂದರ ಮೂರ್ತಿ ಅರಳಿ ನಿಂತಿದೆ. ಗಣೇಶ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.. ಈ ಹಾಡಿನ ಸಾಲು ರಾಮಭಕ್ತರ ಹೃದಯಕ್ಕೆ ಹತ್ತಿರವಾಗಿದೆ. ಈ ಹಾಡು ಬರೆದವರು ನಮ್ಮ ಕರುನಾಡಿನ ಸಾಗರ ಮೂಲದ ಗಜಾನನ ಶರ್ಮಾ. ಇವರಿಗೂ ಅಭಿನಂದನೆ ಸಲ್ಲಿಸಲಾಯಿತು.

ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ನಿರ್ದೇಶಕರು ಹೆಚ್‌.ಎಸ್.ವೆಂಕಟೇಶ್‌ ಹಾಗೂ ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರ ತಂಡವನ್ನು ಸ್ಮರಿಸಲೇಬೇಕು. ಮಂದಿರ ನಿರ್ಮಾಣದ ಅಡಿಪಾಯದಿಂದ ಹಿಡಿದು ಕೆತ್ತನೆಯವರೆಗೂ ಎಲ್ಲಾ ಕಲ್ಲುಗಳ ಗುಣಮಟ್ಟ ವಿಶ್ಲೇಷಣೆ ಮಾಡಿದರು. ಅಲ್ಲದೇ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿರುವ ಶಿಲೆಯನ್ನೂ ಇವರೇ ಅಂತಿಮಗೊಳಿಸಿದ್ದು. ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರನ್ನು ಗೌರವಿಸಲಾಯಿತು.

ಐತಿಹಾಸಿಕ ರಾಮಮಂದಿರ ಬೆಳಗುವ ಸದಾವಕಾಶ ಸಿಕ್ಕಿದ್ದು ಕೂಡ ಕನ್ನಡಿಗರಿಗೆ. ಕರಾವಳಿ ಮೂಲದ ಆರ್‌.ರಾಜೇಶ್‌ ಶೆಟ್ಟಿ ಮತ್ತು ತಂಡವು ರಾಮಮಂದಿರದ ಸಮಗ್ರ ವಿದ್ಯುತ್‌ ದೀಪಾಲಂಕಾರದ ಹೊಣೆ ಹೊತ್ತು ಯಶಸ್ವಿಯಾಗಿ ನಿಭಾಯಿಸಿದರು. ರಾಜೇಶ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ನೀಡಿದ ಮುಹೂರ್ತವೇ ಅಂತಿಮವಾಗಿತ್ತು. ಪಂಡಿತ ವಿಜಯೇಂದ್ರ ಶರ್ಮಾ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

ಭವ್ಯ ರಾಮಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯ ಮೇಲೆ ಪ್ರಜ್ವಲಿಸುವ ಸೂರ್ಯನ ಕಿರಣ ಲೋಗೋ ಇರುವ ಅಯೋಧ್ಯಾ ಲಾಂಛನ ಮಾಡಿದವರು ಕಲಬುರಗಿಯ ರಮೇಶ್‌ ಜಿ ತಿಪ್ಪನೂರ ಅವರು. ಇವರನ್ನೂ ಅಭಿನಂದಿಸಲಾಯಿತು.

ಪಬ್ಲಿಕ್‌ ಟಿವಿಯ 12 ರ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಸಹ ಗೌರವಿಸಲಾಯಿತು.