86ರ ಹರೆಯದಲ್ಲಿ ಪಿಎಚ್‍ಡಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಕೊಪ್ಪಳದ ಶರಣಬಸಪ್ಪ

ಬಳ್ಳಾರಿ: ಸಾಧಿಸುವ ಛಲ, ಓದುವ ಹಂಬಲ ಇದ್ದರೆ ಏನು ಬೇಕಾದ್ರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಇವರಿಗೆ ಬರೋಬ್ಬರಿ 86 ವರ್ಷ ವಯಸ್ಸು. ಆದರೂ ಇವರ ಓದುವ ಹಂಬಲ ಮಾತ್ರ ನಿಂತಿಲ್ಲ. ಕಲಿಯುವ ಕನವರಿಕೆ ಸಹ ಕಡಿಮೆಯಾಗಿಲ್ಲ. ಯುವಕರು ನಾಚುವಂತೆ ಇಳಿವಯಸ್ಸಿನಲ್ಲಿ ಪಿಎಚ್‍ಡಿ ಅಧ್ಯಯನ ಮಾಡುತ್ತಿರೋ ಶರಣಬಸಪ್ಪ ಬಿಸರಳ್ಳಿ ಇದೀಗ ಪಬ್ಲಿಕ್ ಹೀರೋ ಆಗಿದ್ದಾರೆ.

ಹೌದು. ಕಲಿಕೆಗೆ ವಯಸ್ಸಿನ ಹಂಗಿಲ್ಲ ಅನ್ನೋದಕ್ಕೆ ಸಾಕ್ಷಿ ಇವರು. ಶರಣ ಬಸಪ್ಪ ಅವರ ಊರು ಕೊಪ್ಪಳದ ಬಿಸರಳ್ಳಿ. ಹಂಪಿ ಕನ್ನಡ ವಿವಿಯಲ್ಲಿ ಈಗ ಶರಣಬಸಪ್ಪ ಪಿಎಚ್‍ಡಿ ವಿದ್ಯಾರ್ಥಿಯಾಗಿದ್ದಾರೆ. ಮೊಮ್ಮಕ್ಕಳ ಜೊತೆ ಇರಬೇಕಾದ ವಯಸ್ಸಿನಲ್ಲಿ ಇದೆಲ್ಲ ಬೇಕಾ ಎಂದು ಕೇಳಿದರೆ ಪಿಎಚ್‍ಡಿ ಮಾಡಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.

ಅಂದ ಹಾಗೇ ಶರಣಬಸಪ್ಪ ಬಿಸರಳ್ಳಿ ಸ್ವಾತಂತ್ರ್ಯ ಹೋರಾಟಗಾರು. ಮೂರು ಬಾರಿ ಜೈಲುವಾಸ ಅನುಭವಿಸಿ ಬಂದವರು. ಆರು ಮಕ್ಕಳ ತಂದೆಯಾಗಿರೋ ಶರಣಬಸಪ್ಪಗೆ ಪಿಹೆಚ್‍ಡಿ ಮಾಡಬೇಕೆಂಬ ಬಯಕೆ ಇನ್ನಿಲ್ಲದಂತೆ ಕಾಡುತ್ತಿತ್ತು. ಮೂರನೇ ಯತ್ನದಲ್ಲಿ ಶರಣಬಸಪ್ಪಗೆ ಪಿಹೆಚ್‍ಡಿ ಸೀಟ್ ಸಿಕ್ಕಿದೆ. ಕವಿ ಚನ್ನಕವಿ ದ್ಯಾಂಪುರ ಅವರ ಕುರಿತು ಪಿಎಚ್‍ಡಿ ಅಧ್ಯಯನ ಮಾಡುತ್ತಿದ್ದಾರೆ. ಶರಣಬಸಪ್ಪ ಕಲಿಕೆಯ ಹಂಬಲಕ್ಕೆ ಪ್ರಾಧ್ಯಾಪಕರೇ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ವಚನಕಾರರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಶರಣಬಸಪ್ಪರು ಈಗಾಗಲೇ ಹಲವು ಪುಸ್ತಕ ಬರೆದಿದ್ದಾರೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಡಾಕ್ಟರೇಟ್ ಪಡೆಯುವ ಉತ್ಸಾಹದಲ್ಲಿ ಶರಣಬಸಪ್ಪ ಯುವಕರಂತೆ ಪಿಎಚ್‍ಡಿ ಅಧ್ಯಯನ ಮಾಡುತ್ತಿರುವುದು ನಿಜಕ್ಕೂ ವಿಶೇಷವೇ ಸರಿ.

Comments

Leave a Reply

Your email address will not be published. Required fields are marked *