ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್

– ವಿದೇಶಕ್ಕೆ ತರಕಾರಿ ರಫ್ತು, ಕೈ ತುಂಬಾ ಕಾಸು

ಆನೇಕಲ್: ಇಂದು ರೈತರು ತಮ್ಮ ಮಕ್ಕಳನ್ನ ವ್ಯವಸಾಯಕ್ಕೆ ಇಳಿಸಲು ಹಿಂಜರೀತಾರೆ. ಸಾಲ ಮಾಡಿಯಾದರೂ ಮಕ್ಕಳನ್ನು ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಕಳಿಸುತ್ತಾರೆ. ಈ ಮಧ್ಯೆ ತುಂಡು ಭೂಮಿಯಲ್ಲಿ ವಿದೇಶಿ ಕೃಷಿ ಮಾಡಿ ರೈತರೊಬ್ಬರು ಕೈ ತುಂಬಾ ಕಾಸು ಮಾಡುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

ಹೌದು. ಆನೇಕಲ್ ತಾಲೂಕಿನ ಮೇಡಹಳ್ಳಿಯ ಪ್ರಗತಿಪರ ರೈತ ಮುರುಗೇಶ್, ತನಗಿರುವ ಕೇವಲ 23 ಗುಂಟೆ ಕೃಷಿ ಭೂಮಿಯಲ್ಲಿ ಏಕಕಾಲದಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೆದು, ಕೈ ತುಂಬಾ ಕಾಸು ಮಾಡುತ್ತಿದ್ದಾರೆ. ಮುರುಗೇಶ್ ಓದಿದ್ದು 10 ನೇ ತರಗತಿವರೆಗೆ ಮಾತ್ರ. ಅಪ್ಪ-ಅಮ್ಮ ಓದಿಸ್ತೀನಿ ಅಂದ್ರೂ ಕೇಳದ ಮುರುಗೇಶ್, ಐದು ವರ್ಷದ ಹಿಂದೆ ಕೃಷಿ ಕೆಲಸಕ್ಕೆ ಇಳಿದರು. ಆದರೆ ಎಲ್ಲರಂತೆ ರಾಗಿ, ಭತ್ತ ಬೆಳೆಯಲು ಹೋಗದೇ ಇಂಟರ್ ನೆಟ್, ಪ್ರಗತಿಪರ ರೈತರ ನೆರವಿಂದ ವಿದೇಶಿ ಬೆಳೆ ಬೆಳೆಯಲು ನಿಂತರು. ಬ್ರೊಕೊಲ್ಲಿ, ಗ್ರೀನ್ ನೋಟಿಸ್, ರೋಮನ್ ನೋಟಿಸ್, ಚೈನೀಸ್ ಕ್ಯಾಬೇಜ್, ಎಲ್ಲೋ ಕ್ಯಾರೆಟ್, ಬ್ಲಾಕ್ ಕ್ಯಾರೆಟ್ ಹೀಗೆ ಹಲವು ಬೆಳೆ ಬೆಳೆದು, ವಿದೇಶಗಳಿಗೂ ರಫ್ತು ಮಾಡ್ತಿದ್ದಾರೆ.

ಮುರುಗೇಶ್ ಕೃಷಿ ನೋಡಲು ಯಾವಗಲೂ ಸಂಘ ಸಂಸ್ಥೆಗಳು, ವಿದೇಶಿ ವ್ಯಕ್ತಿಗಳು ಆಗಮಿಸುತ್ತಿರುತ್ತಾರೆ. ಮುರುಗೇಶ್ ಎಲ್ಲರಿಗೂ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಮುರುಗೇಶ್ ಸ್ನೇಹಿತ ಕಾಂತರಾಜು ಹೇಳುತ್ತಾರೆ.

ಅನಾದಿಕಾಲದ ಕೃಷಿ ಮಾಡುತ್ತಾ ಸಾಲ ತೀರಿಸಲಾಗದೆ ಒದ್ದಾಡ್ತಿರೋ ಕೃಷಿಕರ ನಡುವೆ ಯುವ ರೈತ ಮುರುಗೇಶ್ ವಿಭಿನ್ನವಾಗಿ ಕಾಣುತ್ತಾರೆ.

Comments

Leave a Reply

Your email address will not be published. Required fields are marked *