ಉಡುಪಿ: ನಾಡಿನಾದ್ಯಂತ ದಸರಾ ಮಹೋತ್ಸವ ನಡೆಯುತ್ತಿದೆ. ಈ ನಡುವೆ ಉಡುಪಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕ್ರಾಂತಿಯಾಗಿದೆ. ಪಬ್ಲಿಕ್ ಹೀರೊ ನಿತ್ಯಾನಂದ ಒಳಕಾಡು ಅವರು ಧಾರ್ಮಿಕ ಆಚರಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಆಯುಧ ಪೂಜೆ ನಡೆಯಿತು. ಉಚಿತ ಸೇವೆ ಒದಗಿಸುವ ಎರಡು ಜೀವರಕ್ಷಕ ಅಂಬುಲೆನ್ಸ್, ಉಚಿತ ಸೇವೆಯ ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ, ಹಸಿರು ಅಭಿಯಾನದ ಸೈಕಲ್ ರಿಕ್ಷಾ, ಬೈಕ್ ಗಳಿಗೆ ಪೂಜೆ ಮಾಡಲಾಯಿತು.

ಪೂಜೆ ಮಾಡಿದ್ರೆ ಅದ್ರಲ್ಲೇನು ವಿಶೇಷ ಅಂತ ಕೇಳ್ಬೇಡಿ. ಪೂಜೆ ಮಾಡಿದ್ದು ಬ್ರಾಹ್ಮಣ ಮತ್ತಿತರ ಮೇಲ್ಜಾತಿಯ ಅರ್ಚಕರಲ್ಲ. ಕೊರಗ ಸಮುದಾಯದ ವ್ಯಕ್ತಿ ವಾಹನ ಪೂಜೆ ಮಾಡುವ ಮೂಲಕ ಕ್ರಾಂತಿ ಮಾಡಿದ್ದಾರೆ. ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ವಾಹನ ಪೂಜೆ ನಡೆಸಿದ್ದು ಸುಂದರ ಕೊರಗ. ಕೊರಗಜ್ಜ ದೈವದ ಚಾಕರಿ(ಸೇವೆ) ಮಾಡುವ ಸುಂದರ ಕೊರಗ ವಾಹನ ಪೂಜೆ ಮಾಡಿದ್ದಾರೆ.

ಎಚ್. ಸುಂದರ ಕೊರಗ ಮಂಚಿ ಗ್ರಾಮದವರಾಗಿದ್ದು, ತಮ್ಮ ಬುಡಕಟ್ಟು ಕೊರಗ ಸಂಪ್ರದಾಯದಂತೆ ಶುದ್ಧ, ಕರ್ಪೂರಾರತಿ, ಆರತಿ ಸೇವೆ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನು ದಸರಾ ಸಂದರ್ಭ ವಾಹನ ಪೂಜೆ ಮಾಡಿದ್ದೇನೆ. ಬಹಳ ಖುಷಿಯಾಗುತ್ತಿದೆ ಈ ಬೆಳವಣಿಗೆ ನನಗೆ, ನಮ್ಮ ಸಮಾಜಕ್ಕೆ ಸಿಕ್ಕ ದೊಡ್ಡ ಗೌರವ ಅಂತ ಸುಂದರ ಕೊರಗ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಈ ಮೂಲಕ ಸಮಾಜದಲ್ಲಿ ಕೊರಗರಿಗೂ ಸ್ಥಾನಮಾನವಿದೆ. ಅವರೂ ಸಾರ್ವಜನಿಕವಾಗಿ ಮುಂದೆ ಬರಬೇಕು ಎಂಬ ಆಶಯವನ್ನು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ತೋರಿಸಿಕೊಟ್ಟಿದ್ದಾರೆ. ನಮ್ಮ ಸೇವೆ ಜಾತ್ಯಾತೀತ ಮತ್ತು ಧರ್ಮಾತೀತ. ಎಲ್ಲಾ ಜನರಿಗೂ ನಮ್ಮ ಸೇವೆ ಉಚಿತ. ಕೊರಗ ಸಮುದಾಯಕ್ಕೆ ಮೇಲ್ಪಂಕ್ತಿ ಹಾಕುವುದು ನಮ್ಮ ಉದ್ದೇಶ. ಅವರು ನಮ್ಮ ನೆಲದ ಮೂಲ ಜನಾಂಗ. ಅವರಿಗೆ ಮೊದಲ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳಿದರು.
ಸಮಾಜ ಸೇವಕರಾದ ತಾರನಾಥ ಮೇಸ್ತ ವಿನಯಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರಿಗೆ ತಿಂಡಿ ತಂಪು ಪಾನೀಯ ಸವಿದು ಕ್ರಾಂತಿಗೆ ಕಾರಣವಾದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=FUzwjukmN0U

Leave a Reply