ಚಿಕ್ಕವಯಸ್ಸಿಗೇ ದೊಡ್ಡ ಜನೋಪಕಾರಿ ಕಾರ್ಯ- ಮೂರೇ ತಿಂಗಳಲ್ಲಿ 500 ಶೌಚಾಲಯ ನಿರ್ಮಾಣ!

ಚಿಕ್ಕಮಗಳೂರು: ಮನೆ ಪಕ್ಕದ ಗರ್ಭಿಣಿಯೊಬ್ರು ಶೌಚಾಲಯವಿಲ್ಲದೆ ಪರದಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಯುವಕ ಇಡೀ ಗ್ರಾಮ ಪಂಚಾಯ್ತಿಯ ಹಳ್ಳಿಯ ಪ್ರತಿಯೊಂದು ಮನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮಾಡಿದ್ದಾರೆ.

ಹೌದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜಿಗಣೆಹಳ್ಳಿ ನಿವಾಸಿ ಮಹಾಂತೇಶ್ ಈ ಮಹಾನ್ ಕಾರ್ಯ ಮಾಡಿದ ಯುವಕ. ಎಸ್‍ಎಸ್‍ಎಲ್‍ಸಿಗೆ ಶಾಲೆ ಬಿಟ್ಟ ಇವರ ವಯಸ್ಸೀಗ 18. ಈ ವಯಸ್ಸಿನಲ್ಲೇ ಇಡೀ ಗ್ರಾಮ ಪಂಚಾಯ್ತಿಯ ಗಮನ ಸೆಳೆದಿದ್ದಾರೆ. ಶೌಚಾಲಯ ನಿರ್ಮಾಣದ ಬಗ್ಗೆ ಅರಿವು ಮೂಡಿಸಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳಲ್ಲಿ ಮೂರೇ ತಿಂಗಳಲ್ಲಿ 500ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣವಾಗುವಂತೆ ಮಾಡಿದ್ದಾರೆ.

ಪ್ರತಿ ಮನೆಗೂ ಹೋಗಿ ಶೌಚಾಲಯದ ಉಪಯೋಗದ ಮಹತ್ವ ತಿಳಿಸಿದ್ದಾರೆ. ದಾಖಲೆ ಪಡೆದು, ಗ್ರಾಮ ಪಂಚಾಯಿತಿಗೆ ಅರ್ಜಿ ಬರೆದು, ಜಾಗದ ಫೋಟೋ ತೆಗೆದು, ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನ ಸ್ಥಳಕ್ಕೆ ಕರೆತಂದು ಕೆಲಸ ಮಾಡಿಸಿದ್ದಾರೆ. ನೀವು ಹಣ ಕೊಡೋದು ಬೇಡ, ಸರ್ಕಾರವೇ ಹಣ ಕೊಡುತ್ತೆ ಅಂತ ಹಳ್ಳಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಮಹಾಂತೇಶ್ ಕಾರ್ಯಕ್ಕೆ ಮೊದಮೊದಲು ತಂದೆ ಬೈಯುತ್ತಿದ್ರಂತೆ. ಆದ್ರೆ, ಊರಿನ ಜನ ನಿನ್ನ ಮಗ ಒಳ್ಳೆ ಕೆಲಸ ಮಾಡ್ತಿದ್ದಾನೆ ಅಂದ ಮೇಲೆ ಸುಮ್ಮನಾದ್ರಂತೆ. ಸದ್ಯ ತನ್ನ ಕಾರ್ಯವನ್ನ ಮತ್ತಷ್ಟು ಹಳ್ಳಿಗಳಿಗೆ ಮುಂದುವರಿಸ್ತೇನೆ ಅಂತಿರೋ ಮಹಾಂತೇಶ್‍ಗೆ ಮತ್ತಷ್ಟು ಜನರ ಬೆಂಬಲ ಸಿಗಬೇಕಿದೆ.

https://www.youtube.com/watch?v=cbkBNkXu0do

Comments

Leave a Reply

Your email address will not be published. Required fields are marked *