ಶಿವಮೊಗ್ಗ: ಮನಸಿದ್ದರೆ ಮಾರ್ಗ ಅಂತ ಸಾಧನೆ ಮಾಡಿದವರ ಬಗ್ಗೆ ಇದೇ ಪಬ್ಲಿಕ್ ಹೀರೋನಲ್ಲಿ ಹಲವು ಬಾರಿ ತೋರಿಸಿದ್ದೇವೆ. ಇವತ್ತು ಅಂಥದ್ದೇ ಸ್ಫೂರ್ತಿದಾಯಕ ಸ್ಟೋರಿ ಶಿವಮೊಗ್ಗದಿಂದ ಬಂದಿದೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಜನಿಸಿದ ಇವರು ತಮ್ಮ ಓದಿಗಾಗಿ ಮದುವೆಗೆ ಷರತ್ತು ಇಟ್ಟು ಎಂಜಿನಿಯರ್ ಆಗಿದ್ದಾರೆ. ಅಲ್ಲದೆ ತಮ್ಮ ಜನಾಂಗದ ಸಂಸ್ಕೃತಿ ಪಸರಿಸೋ ಕೆಲಸವನ್ನೂ ಮಾಡ್ತಿದ್ದಾರೆ.
ಶಿವಮೊಗ್ಗದ ಸಾಗರ ತಾಲೂಕಿನ ಸದಾಶಿವಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕುಮುದಾ ಅವರು ಕುಗ್ರಾಮದಲ್ಲಿ ಹುಟ್ಟಿ ಜೋಪಡಿಗಳಲ್ಲಿ ವಾಸಿಸುತ್ತಲೇ ಹೈಸ್ಕೂಲ್ ಮುಗಿಸಿದ್ದರು. ಆದ್ರೆ ಮನೆಯವರು ಮದುವೆಗೆ ಯತ್ನಿಸಿದಾಗ ಓದಿಸುವ ಭರವಸೆ ನೀಡಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂಬ ಷರತ್ತು ಇಟ್ಟರಂತೆ. ಕೊಟ್ಟ ಮಾತಿನಂತೆ ಪತಿ ಸುಶೀಲಪ್ಪ ಸಹಕಾರದಿಂದ ಕುಮುದಾ ಅವ್ರು ಎಂಜಿನಿಯರಿಂಗ್ ಓದಿ ಜೋಗದ ಕೆಪಿಟಿಸಿಎಲ್‍ನಲ್ಲಿ ಈಗ ಅಸಿಸ್ಟೆಂಟ್ ಎಂಜಿನಿಯರ್ ಆಗಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೆ ಎಂಎ, ಎಂಫಿಲ್ ಮಾಡಿದ್ದಾರೆ. ಹಕ್ಕಿಪಿಕ್ಕಿ ಸೇರಿದಂತೆ ಅಲೆಮಾರಿ ಜನಾಂಗದ ಸಂಸ್ಕøತಿ ಅಧ್ಯಯನ ಮಾಡ್ತಿದ್ದಾರೆ. ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ಈಗಾಗಲೇ ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಇದಕ್ಕಾಗಿ ಒಡಿಶಾ, ತೆಲಂಗಾಣ ಇನ್ನಿತರ ರಾಜ್ಯಗಳಲ್ಲಿ ಸುತ್ತಾಡಿದ್ದಾರೆ. ಈಗ ಹಕ್ಕಿಪಿಕ್ಕಿ ಪದಕೋಶ ಸಿದ್ಧಪಡಿಸ್ತಿದ್ದಾರೆ. ನನ್ನಂತೆ ನಮ್ಮ ಸಮುದಾಯದ ಮಕ್ಕಳೂ ವಿದ್ಯಾಭ್ಯಾಸ ಮಾಡಿ, ಉತ್ತಮ ಜೀವನ ಕಟ್ಟಿಕೊಳ್ಳಬೇಕು ಅಂತಿರೋ ಕುಮುದಾ ಕಾರ್ಯಕ್ಕೆ ಹಕ್ಕಿಪಿಕ್ಕಿ ಜನಾಂಗ ಭೇಷ್ ಅಂತಿದೆ.
ಕುಮುದಾ ಅವ್ರ ಈ ಕಾರ್ಯಕ್ಕೆ ಹಲವು ಪುರಸ್ಕಾರಗಳು ಬಂದಿವೆ. ಮತ್ತಷ್ಟು ಸಾಧನೆ ಮಾಡಬೇಕು ಅನ್ನೋ ಅದಮ್ಯ ಉತ್ಸಾಹ ಅವರದ್ದಾಗಿದೆ.
https://www.youtube.com/watch?v=nvVWyOz6TbQ

Leave a Reply