ಅಕ್ರಮ ಚಟುವಟಿಕೆಗಳ ತಾಣ ಈಗ ಸುಂದರ ಪಾರ್ಕ್- ಫ್ಲೈಓವರ್ ಕೆಳಗೆ ಉದ್ಯಾನವನ ನಿರ್ಮಾಣ

– ಮಂಗಳೂರಿನ ಗುರುಚಂದ್ರ ಹೆಗ್ಡೆ ನಮ್ಮ ಹೀರೋ

ಮಂಗಳೂರು: ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಿಂದ ಪ್ರೇರಿತರಾದ ಉದ್ಯಮಿಯೊಬ್ಬರು ಅಕ್ರಮ ಚಟುವಟಿಕೆಗಳ ತಾಣ ಹಾಗೂ ಡಂಪಿಂಗ್ ಯಾರ್ಡ್ ಆಗಿದ್ದ ಹೈವೇ ಫ್ಲೈ ಓವರ್ ಕೆಳಗಿನ ಜಾಗವನ್ನು ಸುಂದರ ಪಾರ್ಕ್ ಮಾಡಿದ್ದಾರೆ. ಗಬ್ಬೆದ್ದು ನಾರುತ್ತಿದ್ದ ಆ ಸ್ಥಳ ಈಗ ಎಲ್ಲರ ಆಕರ್ಷಣೆಯಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮಂಗಳೂರಿನ ಪಬ್ಲಿಕ್ ಹೀರೋ.

ಮಂಗಳೂರಿನ ಕೂಳೂರು ನಿವಾಸಿ ವಿ.ಜಿ.ಗುರುಚಂದ್ರ ಹೆಗ್ಡೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಟ್ರಾನ್ಸ್‍ಪೋರ್ಟ್ ಉದ್ಯಮ ಆರಂಭಿಸಿದ್ದಾರೆ. ಕೂಳೂರಿನಲ್ಲಿ ಚಿಕ್ಕದಾದ ಒಂದು ಕಚೇರಿಯನ್ನು ಮಾಡಿಕೊಂಡಿದ್ದಾರೆ. ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‍ನ ಕೆಳಭಾಗ ಗೂಡಂಗಡಿಗಳ ತಾಣವಾಗಿತ್ತು. ಎಲ್ಲರೂ ಕಸ ಕಡ್ಡಿ ತಂದು ಇಲ್ಲಿ ಹಾಕುತ್ತಿದ್ದರು. ಇದರಿಂದ ದುರ್ವಾಸನೆ ಬೀರುತ್ತಿತ್ತು. ರಾತ್ರಿಯಾದ್ರೆ ಇಲ್ಲಿ ಅಕ್ರಮ ಚಟುವಟಿಕೆಗಳು ನಡೀತಿದ್ವು. ಇಂದು ಅದೇ ಜಾಗವನ್ನು ಗುರುಚಂದ್ರ ಅವರು ಸುಂದರ ಪಾರ್ಕ್ ಮಾಡಿದ್ದಾರೆ.

ಪಾಲಿಕೆಯ ಅಧಿಕಾರಿಗಳ ಸಹಾಯದಿಂದ ಅಕ್ರಮ ಗೂಡಂಗಡಿಗಳನ್ನು ತೆರವು ಮಾಡಿಸಿದ್ದಾರೆ. 4 ಲಕ್ಷ ರೂಪಾಯಿ ಖರ್ಚು ಮಾಡಿ ಸುಂದರವಾದ ಪಾರ್ಕ್, ಫುಟ್‍ಪಾತ್, ವಾಕಿಂಗ್ ಟ್ರ್ಯಾಕ್ ಮಾಡಿಸಿದ್ದಾರೆ. ಫ್ಲೈ ಓವರ್ ಪಿಲ್ಲರ್‍ಗಳ ಮೇಲೆ ಸುಂದರ ಕಲಾಕೃತಿಗಳನ್ನು ಮೂಡಿಸಿದ್ದಾರೆ.

ಗುರುಚಂದ್ರ ಹೆಗ್ಡೆಯವರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನೂ ನಡೆಸುತ್ತಿದ್ದಾರೆ. ಇವರಿಂದ ಪ್ರೇರೇಪಿತರಾದವರು ತಮ್ಮ ಊರಲ್ಲೂ ಹೀಗೆ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ.

https://www.youtube.com/watch?v=oua2LrHkXJ8

 

Comments

Leave a Reply

Your email address will not be published. Required fields are marked *