ಮಡಿಕೇರಿ: ಬೇರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ರಂಗದಲ್ಲಿ ಪ್ರಯೋಗಗಳು ಅಷ್ಟಾಗಿ ಹೆಚ್ಚೇನೂ ಆಗೋದಿಲ್ಲ. ಹೀಗಾಗಿ ನಮ್ಮ ದೇಶ ಕೃಷಿ ಪ್ರದಾನ ರಾಷ್ಟ್ರವಾದರೂ ಬಹಳ ಹಿಂದೆನೇ ಉಳಿದಿದೆ. ಆದರೆ ಪ್ರತಿ ಹಳ್ಳಿಗೆ ಅಲ್ಲ, ಪ್ರತಿ ಜಿಲ್ಲೆಗೊಬ್ಬ ಇಂತಹ ಅಸಾಧಾರಣ ರೈತನಿದ್ದರೆ ಖಂಡಿತವಾಗಿಯೂ ಕೃಷಿ ಕ್ಷೇತ್ರದಲ್ಲೂ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು.
ಹೌದು. ಮಡಿಕೇರಿಯ ಹುಲಿತಾಳದ ರೈತ ಅಶ್ವಿನ್ ಕುಮಾರ್ ಅವರು ದೇಸಿ ಜೆಸಿಬಿಯ ರೂವಾರಿಯಾಗಿದ್ದಾರೆ. ಬಿಎಸ್ಸಿ ಪದವಿಧರರಾದ ಅಶ್ವಿನ್‍ಗೆ ಹೊಸ ಹೊಸ ಆವಿಷ್ಕಾರಗಳನ್ನ ಮಾಡೋದಂದರೆ ಎಲ್ಲಿಲ್ಲದ ಆಸಕ್ತಿ. ತಮ್ಮ ಕೃಷಿಯ ಅನುಕೂಲಕ್ಕೆ ಜೆಸಿಬಿ ಯಂತ್ರವನ್ನು ಹೋಲುವ ಮಿನಿ ಮಷಿನ್ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಎಲ್ಲ ಕೃಷಿಕರು ಎದುರಿಸೋ ಕಾರ್ಮಿಕರ ಕೊರತೆಯನ್ನ ಅಶ್ವಿನ್ ಕೂಡ ಎದುರಿಸಿದ್ದರು. ಈ ವೇಳೆ ಅಶ್ವಿನ್ ತಲೆಯಲ್ಲಿ ಹೊಳೆದಿದ್ದೇ ಮಿನಿ ಜೆಸಿಬಿ ತಯಾರಿ. ಮೊದಲ ಪ್ರಯತ್ನದಲ್ಲಿ ಸ್ವಲ್ಪ ಎಡವಿದರೂ ನಂತರ ಯಶಸ್ಸನ್ನು ಕಂಡರು. ದೇಸಿ ಜೆಸಿಬಿಗೆ ಬಳಸಿರೋದು ಆಟೋ ರಿಕ್ಷಾದ 8 ಹೆಚ್‍ಪಿ ಸಾಮಥ್ರ್ಯದ ಎಂಜಿನ್. ಜೊತೆಗೆ ಹೈಡ್ರಾಲಿಕ್ ಟ್ಯಾಂಕ್, ಹೈಡ್ರಾಲಿಕ್ ಪಂಪ್, ಹೈಡ್ರಾಲಿಕ್ ಫಿಲ್ಟರ್, ಪ್ರೆಶರ್ ರೆಗ್ಯುಲೇಟರ್ ಬಳಸಲಾಗಿದೆ.
ಮಣ್ಣು ಅಗೆಯುವ ಬಕೆಟ್ ಹಾಗೂ ಸಮತಟ್ಟು ಮಾಡುವ ಬ್ಲೇಡ್‍ನ ಚಲನೆಗಾಗಿ ಬೂಮ್ ಸಿಲಿಂಡರ್ ಕೂಡ ಅಳವಡಿಸಲಾಗಿದೆ. ಜೆಸಿಬಿಯಂತೆ ಗೇರ್‍ಗಳ ನೆರವಿನಿಂದ ಅವುಗಳನ್ನು ಚಲಿಸುವಂತೆ ಮಾಡಲಾಗಿದೆ. ಯಂತ್ರ ತಯಾರಿಸಲು ಖರ್ಚಾಗಿದ್ದು ಕೇವಲ ಎರಡೂವರೆ ಲಕ್ಷ. ಅರ್ಧ ಲೀಟರ್ ಡೀಸೆಲ್ ಇದ್ದರೆ ಒಂದು ಗಂಟೆ ಕೆಲಸ ಮಾಡಬಹುದಾಗಿದೆ ಎಂದು ಅಶ್ವಿನ್ ಹೇಳುತ್ತಾರೆ.

ಸದ್ಯ ಈ ದೇಸಿ ಜೆಸಿಬಿಯನ್ನ ತೋಟದಲ್ಲಿ ಚರಂಡಿ ತೆಗೆಯಲು, ಮಣ್ಣು ಸಮತಟ್ಟು ಮಾಡಲು ಬಳಸುತ್ತಿದ್ದಾರೆ. ಹೊಸದಾಗಿ ಬಾಳೆ ಕೃಷಿ ಮಾಡುತ್ತಿದ್ದು, ಬಾಳೆ ತೋಟದಲ್ಲಿ ಸಣ್ಣ ಸಣ್ಣ ಗುಂಡಿ ತೆಗೆಯಲು ಇದನ್ನು ಪ್ರಾಯೋಗಿಕವಾಗಿ ಬಳಸಿ ಯಶಸ್ಸು ಕಂಡಿದ್ದಾರೆ. ಈ ದೇಸಿ ಜೆಸಿಬಿ ನೋಡಲು ಪ್ರತಿನಿತ್ಯ ಅನೇಕರು ಬರುತ್ತಾರೆ.

Leave a Reply