ಚರಂಡಿ ನೀರಿನಲ್ಲಿ ಶ್ರೀಗಂಧ, ಕರಿಬೇವು- ಬಂಗಾರಪೇಟೆಯ ಅಂಬರೀಶ್ ಪಬ್ಲಿಕ್ ಹೀರೋ

ಕೋಲಾರ: ಬರಗಾಲಕ್ಕೆ ಮತ್ತೊಂದು ಹೆಸರು ಕೋಲಾರ. ಇಲ್ಲಿ ನದಿ ನೀರಿನ ಮೂಲಗಳಿಲ್ಲದ ಕಾರಣ ಈ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ವ್ಯವಸಾಯಕ್ಕೆ ನೀರಿಲ್ಲ ಅಂತ ಕೈ ಕಟ್ಟಿ ಕೂರುವ ಪರಿಸ್ಥಿತಿಯೂ ಜಿಲ್ಲೆಯಲ್ಲಿದೆ. ಆದರೂ ಛಲ ಬಿಡದ ರೈತರು ಇಲ್ಲಿ ವ್ಯವಸಾಯ ಮಾಡಿ ಹಣ್ಣು- ತರಕಾರಿಗಳನ್ನ ಬೆಳೆದು ತೋರಿಸಿದ್ದಾರೆ.

ಹೌದು. ಕೋಲಾರ ಜಿಲ್ಲೆಯ ಬಂಗಾರಪೇಟೆಯ ಜೋತೇನಹಳ್ಳಿ ಗ್ರಾಮದ ಜೋತೇನಹಳ್ಳಿಯ ಯುವ ರೈತ ಅಂಬರೀಶ್ ಊರಿನ ಚರಂಡಿ ನೀರನ್ನು ಬಳಸಿಕೊಂಡು ಶ್ರೀಗಂಧ ಸಸಿಗಳನ್ನು ಬೆಳೆಸೋದಕ್ಕೆ ಮುಂದಾಗಿದ್ದಾರೆ. ತನಗಿರುವ ಅರ್ಧ ಎಕರೆ ಜಮೀನಿನಲ್ಲಿ ಶ್ರೀಗಂಧವೂ ಸೇರಿದಂತೆ ಬಗೆ ಬಗೆಯ 600 ಕ್ಕೂ ಹೆಚ್ಚು ಸಸಿಗಳನ್ನ ಚರಂಡಿ ನೀರಲ್ಲಿ ಆರೈಕೆ ಮಾಡುತ್ತಿದ್ದಾರೆ. ತನಗಿರುವ ಸ್ವಲ್ಪ ಜಮೀನಿನಲ್ಲಿ ಊರಿನ ಚರಂಡಿ ನೀರು ಶೇಖರಣೆಯಾಗುವಂತೆ ಹೊಂಡವನ್ನು ತೆಗೆದಿದ್ದಾರೆ. ಅಲ್ಲಿಂದ ತೋಟಕ್ಕೆ ನೀರು ಹಾಯಿಸುತ್ತಾ ಅಂಬರೀಶ್ ಕಳೆದ ವರ್ಷದಿಂದ ಈ ಪ್ರಯತ್ನ ಮುಂದುವರಿಸಿದ್ದಾರೆ. ಶ್ರೀಗಂಧ ಸೇರಿದಂತೆ ಕರಿಬೇವು ಬೆಳೆದಿರುವ ರೈತ, ಉತ್ತಮ ತಳಿಯ 60 ಕ್ಕೂ ಹೆಚ್ಚು ಕೋಳಿಗಳನ್ನ ಕೂಡ ಸಾಕಾಣಿಕೆ ಮಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಮಳೆಯೂ ಇಲ್ಲ ಬೆಳೆಯೂ ಇಲ್ಲ, ಇದರಿಂದ ಬೇಸತ್ತ ರೈತರು ಕೂಲಿ-ನಾಲಿ ಮಾಡಲು ಮುಂದಾಗಿದ್ದಾರೆ. ಅದರಂತೆ ಜೋತೇನಹಳ್ಳಿಯ ಯುವ ರೈತ ಅಂಬರೀಶ್ ಕೂಡ ಗ್ರಾಮ ಪಂಚಾಯ್ತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಾ, ಅರೆ ನಿರುದ್ಯೋಗಿಯಾಗದೆ ಮಾಸ್ಟರ್ ಪ್ಲಾನ್‍ನಿಂದ ತನ್ನ ಜಮೀನಿನಲ್ಲಿ ಶ್ರೀಗಂಧ ಸೇರಿದಂತೆ ವಿವಿಧ ಬೆಳೆಗಳು ಬೆಳೆಯಲು ಸಹಾಯವಾಗಿದೆ. ಅಂತರ್ಜಲ ಕುಸಿತಕ್ಕೆ ನಿರಾಶೆಯಾಗದೆ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.

ಪ್ರತಿನಿತ್ಯ ಗ್ರಾಮದಿಂದ ಬರುವ ಕೊಳಕು ನೀರನ್ನ ಹಿಡಿದಿಟ್ಟುಕೊಂಡು, ಆ ನೀರನ್ನ ಡ್ರಿಪ್ ಮೂಲಕ ತೆಗೆದು ಗಿಡಗಳ ಬುಡಕ್ಕೆ ಹಾಯಿಸುವ ಅಂಬರೀಶ್, ಫಲವತ್ತಾದ ವ್ಯವಸಾಯ ಮಾಡುತ್ತಿದ್ದಾರೆ. ಚರಂಡಿ ನೀರು ಸದುಪಯೋಗದ ಪ್ರಯತ್ನಕ್ಕೆ ಊರಿನವರ ಮೆಚ್ಚುಗೆ ಕೂಡ ಇದ್ದು, ಕುಸಿಯುತ್ತಿರುವ ಅಂತರ್ಜಲವನ್ನು ನಂಬಿಕೊಂಡು ಸುಮ್ಮನಿರುವ ಬದಲು ಇಂತಹ ಹೊಸ ಆಲೋಚನೆಯು ರೈತರಿಗೆ ಬರಬೇಕಾಗಿದೆ. ಇದು ಎಲ್ಲರಿಗೂ ಮಾದರಿ ಎಂದು ಸ್ಥಳೀಯರು ಹೇಳುತ್ತಾರೆ.

ಒಟ್ಟಿನಲ್ಲಿ ಕಸದಿಂದ ರಸ ತೆಗೆಯುವ ಅಂದ್ರೆ ಕೊಳಕು ನೀರಲ್ಲಿ ಶ್ರೀಗಂಧ ಬೆಳೆದು ಅಂಬರೀಶ್ ಮಾದರಿ ರೈತನಾಗಿದ್ದಾರೆ. ಕೋಲಾರದಂತಹ ಬರಗಾಲ ಪ್ರದೇಶಕ್ಕೆ ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಅಂಬರೀಶ್ ಮಾದರಿಯಾಗಿ ನಿಲ್ತಾರೆ ಅಂದರೂ ತಪ್ಪಾಗಲ್ಲ.

 

Comments

Leave a Reply

Your email address will not be published. Required fields are marked *