ಲಕ್ಷ ಲಕ್ಷ ಸಂಬಳಕ್ಕೆ ಗುಡ್‍ಬೈ, ಆಧುನಿಕ ಕೃಷಿಗೆ ಜೈ- ಬಾಗಲಕೋಟೆಯ ಆಕಾಶ್ ಪಬ್ಲಿಕ್ ಹೀರೋ

– ಬೀಜೋತ್ಪಾದನೆಯಿಂದ ಆದಾಯ ದ್ವಿಗುಣ

ಬಾಗಲಕೋಟೆ: ಕೃಷಿ ಮಾಡಿ ಕೈ ಸುಟ್ಟುಕೊಂಡೇ ಅನ್ನೋವ್ರೇ ಜಾಸ್ತಿ. ಆದರೆ, ಬಾಗಲಕೋಟೆಯ ಆಕಾಶ್ ನಾಯಕ್ ಅವರು ಬೀಜೋತ್ಪಾದನೆಯಲ್ಲಿ ಲಾಭ ಕಂಡುಕೊಂಡಿದ್ದಾರೆ. ತಮ್ಮ ಜೊತೆಗೆ, ತನ್ನೂರಿನ ರೈತರನ್ನು ಒಗ್ಗೂಡಿಸೋದರ ಜೊತೆಗೆ ಸ್ಥಳೀಯ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತೆ ಮಾಡುವ ಮೂಲಕ ಪಬ್ಲಿಕ್ ಹೀರೋ ಅನಿಸಿಕೊಂಡಿದ್ದಾರೆ.

ಬಾಗಲಕೋಟೆ ನಿವಾಸಿಯಾಗಿರುವ ಆಕಾಶ್ ಎಂ.ಎಸ್.ಸಿ ಅಗ್ರಿ ಪದವೀಧರರು. ಲಕ್ಷದವರಗೆ ಸಂಬಳ ಬರುವ ಎಂಎನ್‍ಸಿ ಕಂಪನಿ ಕೆಲಸ ಬಿಟ್ಟು, ಸ್ವಗ್ರಾಮಕ್ಕೆ ಬಂದು ಕೃಷಿ ಆರಂಭಿಸಿದ್ದರು. ಹಲವು ಪ್ರಯೋಗ ಮಾಡಿದರೂ ಕೈ ಸುಟ್ಟುಕೊಂಡಿದ್ದರು. ಕೊನೆಗೆ ತೋಟಗಾರಿಕೆ ಬೆಳೆಗಳು ಕೈಹಿಡಿದವು. ಫಸಲು ಚೆನ್ನಾಗಿ ಬಂದರು ಕೂಡ ಸರಿಯಾದ ಬೆಲೆ ಸಿಗುತ್ತಿರಲಿಲ್ಲ.

ಹಾಗಂತ ಆಕಾಶ್ ಸುಮ್ಮನೆ ಕೂರಲಿಲ್ಲ. ರೈತರ ಗುಂಪೊಂದನ್ನ ಕಟ್ಟಿಕೊಂಡು ಬೀಜೋತ್ಪಾದನೆಗೆ ಮುಂದಾದರು. ಮೊದಲಿಗೆ ಕಲ್ಲಂಗಡಿ ಬೆಳೆದು ಯಶಸ್ವಿಯಾದರು. ನಂತರ, ಅಮೆರಿಕದ ಸೀಜೆಂಟ್ ಸೀಡ್ಸ್ ಕಂಪನಿಯೊಂದಿಗೆ ಕೈಜೋಡಿಸಿ, ಅಕ್ಕಪಕ್ಕದ ರೈತರನ್ನು ಒಗ್ಗೂಡಿಸಿ ಕ್ಯಾಪ್ಸಿಕಮ್, ಸ್ಕ್ವಾಶ್, ಟೊಮೇಟೊ, ಬೀನ್ಸ್, ಕಲ್ಲಂಗಡಿ ಬೆಳೆಯಲು ಪ್ರೇರಿಪಿಸಿದರು.

ಕೇವಲ 10 ಎಕರೆಯಲ್ಲಿ ಶುರುವಾದ ಬೀಜೋತ್ಪಾದನೆ ಇದೀಗ ಸುಮಾರು 800 ಎಕರೆಗೆ ವ್ಯಾಪಿಸಿದೆ. ಸೀಡ್ಸ್ ಕಂಪನಿಯಿಂದ ಪಡೆದ ಬೀಜಗಳನ್ನ ಹೊಲದಲ್ಲಿ ನಾಟಿಸಿ, ವೈಜ್ಞಾನಿಕವಾಗಿ ಅವುಗಳ ಪಾಲನೆ ಪೋಷಣೆ ಮಾಡಿ, ಬಂದಂತಹ ಬೆಳೆಗಳ ಬೀಜಗಳನ್ನ ಮತ್ತೆ ಅದೇ ಕಂಪನಿಗೆ ಮಾರಾಟ ಮಾಡಿಸಿದ್ದಾರೆ. ವೈಜ್ಞಾನಿಕ ಬೆಲೆಯಿಂದ ರೈತರ ಆದಾಯ ದ್ವಿಗುಣವಾಗಿದೆ. ಜೊತೆಗೆ, ಹಳ್ಳಿಗಾಡಿನ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತೆ ಮಾಡಿದ್ದಾರೆ ಎಂದು ರೈತ ಶಿವು ಕೆಲೂಡಿ ಹೇಳುತ್ತಾರೆ.

ಒಟ್ಟಿನಲ್ಲಿ ಕಬ್ಬು, ಶೇಂಗಾ, ಗೋವಿನಜೋಳ, ಈರುಳ್ಳಿ ಅಂತ ಸಾಂಪ್ರದಾಯಿಕ ಬೆಳೆಗಳ ಬೆನ್ನತ್ತಿದ್ದ ರೈತರನ್ನು ಆಕಾಶ್ ಅವರು ಲಾಭದಾಯಕ ಕೃಷಿಯತ್ತ ಕರೆದೊಯ್ದಿದ್ದಾರೆ.

Comments

Leave a Reply

Your email address will not be published. Required fields are marked *