ಪಿಎಸ್‍ಐ ಅಮಾನತು – ಪಟಾಕಿ ಸಿಡಿಸಿ, ಸಿಹಿ ಹಂಚಿ ಸಾರ್ವಜನಿಕರಿಂದ ಸಂಭ್ರಮ

ತುಮಕೂರು: ಪಾವಗಡ-ತುಮಕೂರು ಪಟ್ಟಣ ಠಾಣೆಯ ಪಿಎಸ್‍ಐ ರಾಘವೇಂದ್ರ ಕರ್ತವ್ಯ ಲೋಪದಿಂದಾಗಿ ಅಮಾನತುಗೊಂಡಿದ್ದರಿಂದ ಹರ್ಷಗೊಂಡ ಪಾವಗಡ ಪಟ್ಟಣದ ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಪಟ್ಟಣದ ಶನೇಶ್ವರ ದೇವಸ್ಥಾನದ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಜಮಾವಣೆಗೊಂಡು ಪಟಾಕಿ ಸಿಡಿಸಿ ಎಸ್‍ಪಿಗೆ ಜೈಕಾರ ಕೂಗಿ, ಪಿಎಸ್‍ಐ ರಾಘವೇಂದ್ರಗೆ ಧಿಕ್ಕಾರ ಕೂಗಿದ್ದಾರೆ. ಕಳೆದ 8 ತಿಂಗಳಿನಿಂದ ಪಾವಗಡ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಸಾರ್ವಜನಿಕರ ಜೊತೆ ಅಧಿಕಾರ ದರ್ಪದಿಂದ ನಡೆದುಕೊಳ್ಳುತ್ತಿದ್ದ ಹಾಗೂ ದೂರು ದಾಖಲಿಸಿಕೊಳ್ಳದೇ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ರಾಘವೇಂದ್ರ ಈ ಧೋರಣೆಯಿಂದ ಸಾರ್ವಜನಿಕರು ರೋಸಿ ಹೋಗಿದ್ದರು ಎನ್ನಲಾಗಿದೆ. ಹಾಗಾಗಿ ಪಿಎಸ್‍ಐ ರಾಘವೇಂದ್ರ ಅಮಾನತುಗೊಂಡಿದ್ದು, ತೊಲಗಿತು ಪೀಡೆ ಎಂದು ಹೇಳಿಕೊಂಡು ಸಂಭ್ರಮಿಸಿದ್ದಾರೆ. ಭ್ರಷ್ಟ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಖಡಕ್ ತೀರ್ಮಾನ ತೆಗೆದುಕೊಂಡು ಭ್ರಷ್ಟ ಅಧಿಕಾರಿಗಳಿಗೆ ಛಾಟಿ ಬೀಸಿದ್ದಕ್ಕೆ ಜನ ಸಂಭ್ರಮಿಸಿದ್ದಾರೆ.

ಫೆಬ್ರವರಿ 1ರಂದು ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಪಿಎಸ್‍ಐ ಮುತ್ತುರಾಜು ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸಿದ್ದರ ಬೆನ್ನಲ್ಲೇ ಈಗ ಇನ್ನೋರ್ವ ಪಿಎಸ್‍ಐಯನ್ನು ಕರ್ತವ್ಯ ಲೋಪದ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ.

ಪಾವಗಡ ಪಟ್ಟಣ ಠಾಣೆಯ ಪಿಎಸ್‍ಐ ರಾಘವೇಂದ್ರ ಅವರನ್ನು ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸುಮಾರು ನಾಲ್ಕು ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳದೇ ಅರ್ಜಿದಾರರಿಗೆ ಮೋಸ ಮಾಡುವ ಹುನ್ನಾರ ನಡೆಸಿದ್ದು ಸಾಬೀತಾಗಿದೆ. ಹೀಗಾಗಿ ಯಾವುದೇ ಮುಲಾಜಿಲ್ಲದೆ ಪಿಎಸ್‍ಐ ರಾಘವೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *