ಬೆಂಗಳೂರು: ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದ್ದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ(PSI) ಹುದ್ದೆಗಳ ಅಕ್ರಮ ನೇಮಕಾತಿ ಸಂಬಂಧ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ತಮ್ಮ ಬಳಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮಗೆ ಸಲ್ಲಿಕೆಯಾಗಿದೆ ಎನ್ನಲಾದ ಒಂದು ಆಡಿಯೋ ರೆಕಾರ್ಡ್ ಖರ್ಗೆಯವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ ಎಂದರು.

ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ತನಿಖೆಗೆ ಆದೇಶ ನೀಡಿದ್ದೆ. ಇಂತಹ ಕೃತ್ಯಗಳಿಂದ ಬಡ ಕುಟುಂಬದಿಂದ ಬಂದಂತಹ ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು ಮೂಲೆ ಗುಂಪಾದರೆ ಸಮಾಜಕ್ಕೆ ಆಗುವ ನಷ್ಟ ಅಪಾರ ಎಂದರು. ಇದನ್ನೂ ಓದಿ: ಕೈ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್

ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಸಿಐಡಿ ತನಿಖೆಗೆ ಸಹಾಯವಾಗುವಂತೆ ಸಿಐಡಿ ಪೊಲೀಸರಿಗೆ ತಮ್ಮ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸಬೇಕು. ಈ ಮೂಲಕ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ವಿನಂತಿಸಿದ್ದೆ. ಈಗಲಾದರೂ ಖರ್ಗೆಯವರು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು. ಹಾಗೂ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು ಎಂದು ಗೃಹ ಸಚಿವರು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?

ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೆ ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದರು.

Leave a Reply