ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ

ಬೆಂಗಳೂರು: ಬಿಜೆಪಿ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಬಿಬಿಎಂಪಿ ಮುತ್ತಿಗೆ ಹಾಕಿದೆ. ಜನವಿರೋಧಿ ಕೇಂದ್ರ, ರಾಜ್ಯ ಹಾಗೂ ಬಿಬಿಎಂಪಿ ನೀತಿಗಳ ವಿರುದ್ಧ ಕೈ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಕೇಂದ್ರ, ದಕ್ಷಿಣ, ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ರಾಮಲಿಂಗ ರೆಡ್ಡಿ ನಾಯಕರ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲಾಗಿದೆ. ಬಿಬಿಎಂಪಿ ಚಲೋ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.

ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ, ವಲಯ ವರ್ಗೀಕರಣ ನೆಪದಲ್ಲಿ ಸ್ವತ್ತು ಮಾಲೀಕರ ಮೇಲೆ 120 ಕೋಟಿ ಕಂದಾಯಕ್ಕೆ 240 ಕೋಟಿ ಬಡ್ಡಿ ವಸೂಲಿ ಮತ್ತು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ಹಲಸೂರು ಗೇಟ್ ಪೊಲೀಸರಿಂದ, ಎಸಿಪಿ ನಜ್ಮಾ ಫಾರೂಖಿ ಹಾಗೂ ಪಿಐ ದೀಪಕ್ ನೇತೃತ್ವದಲ್ಲಿ ಬಂದೋ ಬಸ್ತ್ ಒದಗಿಸಲಾಗಿದೆ. ಬಿಬಿಎಂಪಿ ಆವರಣದಲ್ಲಿ ಸುಮಾರು 70 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಒಂದು ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಕೊರೊನಾ ಸ್ಫೋಟದ ಲಕ್ಷಣಗಳು – ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಮಹಾಮಾರಿಯ ಅಬ್ಬರ 

ರಾಜ್ಯ ಹಾಗೂ ಕೇಂದ್ರದ ವಿರುದ್ಧ ಎಂಎಲ್‍ಸಿ ಪಿ.ಆರ್. ರಮೇಶ್ ಅಸಮಾಧಾನ ಹೊರಹಾಕಿ, ವಿನಾಕರಣ ನಗರದ ಜನತೆ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಬಿಡಿಎ ಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಎಲ್ಲಾ ಕಾಂಪ್ಲೆಕ್ಸ್ ಗಳನ್ನ ಮಾರಾಟ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದಾರೆ. ಕೂಡಲೇ ಅನಧಿಕೃತ ಹೊರೆ ಹಾಕ್ತಿರೋ ಹೆಚ್ಚುವರಿ ತೆರಿಗೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕೋವಿಡ್ ಇರುವುದರಿಂದ ಹೆಚ್ಚು ಸಂಖ್ಯೆಯಲ್ಲಿ ಸೇರದೆ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಬಿಎಂಪಿಯಿಂದ ಆಸ್ತಿ ತೆರಿಗೆ ವಿಚಾರದಲ್ಲಿ ತಪ್ಪಾಗಿದೆ. ಸರಿಪಡಿಸಲು ನೀಡಿದ ಗಡುವು ಮುಗಿದಿದ್ದು, ಈಗ ಮುತ್ತಿಗೆ ಹಾಕಿದ್ದೇವೆ. ವಲಯ ವರ್ಗೀಕರಣದ ನೆಪ ಹೇಳಿ ಆಸ್ತಿಮಾಲೀಕರಿಗೆ ವಿನಾಕಾರಣ 104 ಕೋಟಿ ರೂ ಕಂದಾಯಕ್ಕೆ 240 ಕೋಟಿ ರೂ ಬಡ್ಡಿ ಹಾಗೂ ದಂಡ ವಸೂಲಿ ಮಾಡಲು ಮುಂದಾಗಿದ್ದು ತಪ್ಪು. ಬಿಜೆಪಿ ಸರ್ಕಾರ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ. ಪೆಟ್ರೋಲ್ 105, ಗ್ಯಾಸ್ ಬೆಲೆ 900 ದಾಟಿದೆ. ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು, ಇದ್ದಾಗ ಒಂದು ಜನವಿರೋಧಿ ನೀತಿ ಕೈಗೊಳ್ಳುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಕೇವಲ ಬಣ್ಣಬಣ್ಣದ ಮಾತಾಡಿ, ಜನರ ಸಂಕಷ್ಟ ಕೇಳೋರಿಲ್ಲ ಎಂದರು.

Comments

Leave a Reply

Your email address will not be published. Required fields are marked *