ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಕೊಲೆ – ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್

– ಚಿಕ್ಕಪ್ಪನಿಗೆ ರಾಡ್‍ನಿಂದ ಹೊಡೆದು ಭೀಕರ ಕೊಲೆ

ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೇ ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ಉಟ್ನೂರ್ ಮಂಡಲದ ಗಂಗನಪೇಟ ಗ್ರಾಮದಲ್ಲಿ ನಡೆದಿದೆ.

ಟಿ.ಶಿವರಾಜ್ (62) ಮೃತ ನಿವೃತ್ತ ಸಹಾಯಕ ಸಬ್‍ಇನ್‍ಸ್ಪೆಕ್ಟರ್. ಈ ಘಟನೆ ಶುಕ್ರವಾರ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆದ ನಂತರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಟಿ.ವಿವೇಕ್, ಆತನ ಸಹೋದರ ಟಿ.ಮನೋಜ್ ಮತ್ತು ಅವರ ತಾಯಿ ವನಜಾ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

ಏನಿದು ಪ್ರಕರಣ?
ಮೃತ ಟಿ.ಶಿವರಾಜ್ ಮತ್ತು ಅವರ ಸಹೋದರ ಟಿ.ಜಯರಾಜ್ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಶುಕ್ರವಾರ ಜಯರಾಜ್ ಪುತ್ರರಾದ ವಿವೇಕ್ ಮತ್ತು ಮನೋಜ್ ಇಬ್ಬರು ಶಿವರಾಜ್ ವಾಸಿಸುತ್ತಿದ್ದ ಮನೆಗೆ ಹೋಗಿ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕೋಪಗೊಂಡ ವಿವೇಕ್ ಅಲ್ಲೆ ಇದ್ದ ರಾಡ್ ತೆಗೆದುಕೊಂಡು ಶಿವರಾಜ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಶಿವರಾಜ್ ನಿಂತಲ್ಲೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇತ್ತ ಶಿವರಾಜ್ ಮೃತಹೇಹದೊಂದಿಗೆ ವಿವೇಕ್ ಸೆಲ್ಫಿ ತೆಗೆದುಕೊಂಡು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಶಿವರಾಜ್ ಅವರು 2017ರಲ್ಲಿ ನಿವೃತ್ತರಾಗಿದ್ದು, ಸ್ಥಳೀಯ ಗಂಗನಪೇಟ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪೂರ್ವಜರ ಆಸ್ತಿಯನ್ನು ಶಿವರಾಜ್ ಮತ್ತು ಜಯರಾಜ್ ನಡುವೆ ಸಮಾನವಾಗಿ ಹಂಚಿಕೆ ಮಾಡಿಲ್ಲ ಎಂದು ಆಗಾಗ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆದರೆ ಶುಕ್ರವಾರ ಜಗಳ ವಿಕೋಪಕ್ಕೆ ಹೋಗಿ ವಿವೇಕ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿ ವಿವೇಕ್, ಸಹೋದರ ಮತ್ತು ತಾಯಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *