ಹಿರಿಯ ಸಾಹಿತಿ, ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿರಾವ್ ಇನ್ನಿಲ್ಲ

ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿ ರಾವ್(95) ಇಂದು ಕೊನೆಯುಸಿರೆಳೆದಿದ್ದಾರೆ. ಶೇಷಗಿರಿರಾವ್ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು, ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

1925 ಫೆಬ್ರವರಿ 16ರಂದು ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಜನಿಸಿದ್ದ ಇವರು ಕನ್ನಡ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಪುಸ್ತಕ ಪ್ರಾಧಿಕಾರದ ಪ್ರಥಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿಯಾದ ಕಾರ್ಯಕ್ರಮ ನಡೆಸಿದ್ದ ಹೆಮ್ಮೆ ಇವರದ್ದಾಗಿದೆ.

ಶೇಷಗಿರಿರಾವ್ ಅವರ ಪ್ರಮುಖ ಕೃತಿಗಳೆಂದರೆ ಆಲಿವರ್ ಗೋಲ್ಡ್ ಸ್ಮಿತ್, ಪಾಶ್ಚಾತ್ಯ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ. ಇವರಿಗೆ ವರ್ಧಮಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಇವರ ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದ್ದು, ಹಿರಿಯ ಸಾಹಿತಿಯ ಅಗಲಿಕೆಗೆ ಸಿಎಂ ಯಡಿಯೂರಪ್ಪ, ಎಸ್.ಎಂ ಕೃಷ್ಣ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.

ಸಣ್ಣ ಕಥೆಯೊಂದಿಗೆ ಸಾಹಿತ್ಯ ಕೃಷಿ ಆರಂಭಿಸಿದ ಎಲ್‍ಎಸ್‍ಎಸ್ ಅವರು ಮಕ್ಕಳ ಸಾಹಿತ್ಯ, ವಿಮರ್ಶೆ ಹಾಗೂ ಎಲ್ಲಕ್ಕೂ ಮಿಗಿಲಾಗಿ ನಿಘಂಟು ಕರ್ತೃವಾಗಿ ಕನ್ನಡ ಭಾಷೆ, ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಸರಳತೆ, ಸಜ್ಜನಿಕೆಯೇ ಮೂರ್ತಿಯಂತಿದ್ದ ಶೇಷಗಿರಿರಾಯರ ನಿಧನದಿಂದ ಕನ್ನಡ ಸಾರಸ್ವತ ಲೋಕದ ನಕ್ಷತ್ರವೊಂದು ಮರೆಯಾಯಿತು ಎಂದು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರು, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *