ಬೆಂಗಳೂರು: ಈಶ್ವರ ಪೋಲಂಕಿ ನಿರ್ದೇಶನದ ರುದ್ರಾಕ್ಷಿಪುರ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಥ್ರಿಲ್ಲರ್ ಕಥಾನಕ ಹೊಂದಿರೋ ಈ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರೂ ಕಾತರರಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಹಿಂದೆ ನಿರ್ಮಾಪಕರಾಗಿ, ಸಿನಿಮಾ ಪ್ರೇಮಿಯಾಗಿ ನಿಂತಿರುವವರು ನಾಗರಾಜ್ ಮುರುಡೇಶ್ವರ!
ಯಾವ ಮೂಲೆಯಲ್ಲಿ, ಯಾವ ಕೆಲಸ ನೆಚ್ಚಿಕೊಂಡಿರೋ ಜೀವಗಳಿಗೆ ಈ ಸಿನಿಮಾ ಕನಸು ಬೀಳುತ್ತೋ ಹೇಳಲು ಬರೋದಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಇದೆ ರುದ್ರಾಕ್ಷಿಪುರ ಚಿತ್ರದ ನಿರ್ಮಾಪಕ ನಾಗರಾಜ್ ಮುರುಡೇಶ್ವರ ಅವರ ರಿಯಲ್ ಸ್ಟೋರಿ!

ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಯಾತ್ರಾ ಸ್ಥಳವಾದ ಮುರುಡೇಶ್ವರ ನಾಗರಾಜ್ ಅವರ ಊರು. ತೀರಾ ಹನ್ನೊಂದನೇ ವರ್ಷಕ್ಕೆ ಊರು ಬಿಟ್ಟಿದ್ದ ಅವರು ನಂತರ ಹೋಗಿದ್ದು ದೂರದ ಚೆನ್ನೈಗೆ. ಅಲ್ಲಿ ಏನೇನೋ ಪಡಿಪಾಟಲು ಪಟ್ಟು ವಿವೇಕ್ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡ ನಾಗರಾಜ್ ಶಿಲ್ಪಕಲೆಯ ಸಂಪೂರ್ಣ ಪಾಠ ಕಲಿತದ್ದು ಅಲ್ಲಿಯೇ. ಆ ನಂತರ ಹತ್ತಾರು ವರ್ಷಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ ಇದೀಗ ಅವರು ಶಿವಮೊಗ್ಗದಲ್ಲಿ ಚೌಡೇಶ್ವರಿ ಶಿಲ್ಪಕಲಾ ಕಂಪೆನಿ ತೆರೆದಿದ್ದಾರೆ. ಇದರಡಿಯಲ್ಲಿ ಮೂವತ್ತಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.

ಹೀಗೆ ಶಿಲ್ಪಿಯಾಗಿ ಯಶ ಕಂಡಿರೋ ನಾಗರಾಜ್ ಅವರು ಹದಿನೈದು ವರ್ಷಗಳಿಂದಲೂ ನಿರ್ದೇಶಕನಾಗ ಬೇಕೆಂಬ ಕನಸನ್ನು ಸಾಕಿಕೊಂಡಿದ್ದರು. ಆದರೆ ನಿರ್ದೇಶಕ ಈಶ್ವರ್ ಪೋಲಂಕಿ ಹೇಳಿದ ಕಥೆ, ಅದರಲ್ಲಿನ ಹೊಸತನ ಕಂಡಾಗ ಮೊದಲು ನಿರ್ಮಾಪಕನಾಗಿ ಅಖಾಡಕ್ಕಿಳಿಯೋದೇ ಒಳಿತೆನ್ನಿಸಿತ್ತಂತೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಒಂದಷ್ಟು ಪಾಠವನ್ನೂ ನಾಗರಾಜ್ ಕಲಿತುಕೊಂಡಿದ್ದಾರೆ.
ರುದ್ರಾಕ್ಷಿಪುರ ಚಿತ್ರವನ್ನು ಖಂಡಿತಾ ಜನ ಮೆಚ್ಚಿ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ನಾಗರಾಜ್ ಅವರಿಗಿದೆ. ಜೊತೆಗೆ ಮುಂದೆ ತಾವೇ ನಿರ್ದೇಶಕರಾಗಿ ಹೊರ ಹೊಮ್ಮಲು ಬೇಕಾದ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply