ಬೆಂಗಳೂರು: ಗುರುದೇಶಪಾಂಡೆ ನಿರ್ದೇಶನದಲ್ಲಿ ರೂಪುಗೊಂಡಿರೋ ಚಿತ್ರ ಪಡ್ಡೆಹುಲಿ. ಈ ಮೂಲಕ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದ ಹಾಡೊಂದು ರೆಡಿಯಾಗಿದೆ. ಕೆ.ಮಂಜು ಈ ಹಾಡನ್ನು ತಮ್ಮ ಗುರುಗಳಾದ ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋದಲ್ಲದೆ, ವಿಷ್ಣು ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ!
ಇದು ನಾಯಕನನ್ನು ಪರಿಚಯಿಸೋ ಸಾಂಗು. ನಾ ತುಂಬಾ ಹೊಸಬ ಬಾಸು ಅಂತ ಆರಂಭವಾಗೋ ಈ ಹಾಡನ್ನು ಶ್ರದ್ಧೆಯಿಂದ ಚಿತ್ರತಂಡ ರೂಪಿಸಿದೆ. ಇದನ್ನು ಕೆ.ಮಂಜು ತಮ್ಮ ಗುರುಸ್ವರೂಪಿಯಾದ ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದಾರೆ. ಫೆಬ್ರವರಿ 2ರಂದು ಮಧ್ಯಾಹ್ನ ಹನ್ನೆರಡು ಘಂಟೆಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನೂ ಆಯೋಜಿಸಿದ್ದಾರೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸುವಂತೆ ವಿಷ್ಣು ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಈ ಹಿಂದೆ ಪಡ್ಡೆಹುಲಿಯ ರ‍್ಯಾಪ್ ಶೈಲಿಯ ಒಂದು ಹಾಡನ್ನ ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿತ್ತು. ಅದರಲ್ಲಿ ಶ್ರೇಯಸ್ ನಾಗರಹಾವಿನ ವಿಷ್ಣು ಗೆಟಪ್ಪಿನಲ್ಲಿ ಮಿಂಚಿದ್ದರು. ಅದರಂತೆಯೇ ಈ ಹಾಡೂ ಕೂಡಾ ಚೆಂದಗೆ ಮೂಡಿ ಬಂದಿದೆಯಂತೆ. ವಿಷ್ಣು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಂಜು ಅವರನ್ನೇ ತಮ್ಮ ಗುರುವೆಂದು ಪರಿಭಾವಿಸಿರುವವರು. ತಮ್ಮ ಮಗನ ಮೊದಲ ಚಿತ್ರದ ಮೂಲಕ ಅವರು ವಿಷ್ಣು ಅಭಿಮಾನವನ್ನ ಮತ್ತಷ್ಟು ಗಾಢವಾಗಿ, ಸಾರ್ಥಕವಾಗಿ ಪ್ರಚುರಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply