ಬಾಹುಬಲಿ-2 ರಿಲೀಸ್‍ಗೆ ಗ್ರೀನ್ ಸಿಗ್ನಲ್: ಕನ್ನಡಿಗರನ್ನು ಹೀಯಾಳಿಸೋ ಕೆಲಸ ಮಾಡ್ಬೇಡಿ

ಬೆಂಗಳೂರು: ಬಾಹುಬಲಿ ಚಿತ್ರದ ಬಿಡುಗಡೆಗೆ ಕನ್ನಡ ಸಂಘಟನೆಗಳು ಅಡ್ಡಿಪಡಿಸಲ್ಲ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿವೆ.

ಒಕ್ಕೂಟದ ಪರವಾಗಿ ವಾಟಾಳ್ ನಾಗರಾಜ್ ಮಾತನಾಡಿ, ಸತ್ಯರಾಜ್ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕಾಗಿತ್ತು. ಅವರು ಎಲ್ಲೋ ಒಂದು ಕಡೆ ಕುಳಿತು ಹೇಳಿಕೆ ನೀಡಿದ್ದಾರೆ. ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿದರು.

ಸದ್ಯಕ್ಕೆ ಇಲ್ಲಿಗೆ ನಾವು ಈ ವಿಷಯವನ್ನ ಕೈ ಬಿಡುತ್ತೇವೆ. ಬೇರೆ ಬೇರೆ ಹೋರಾಟಗಳಿವೆ. ಯಾರೂ ಕನ್ನಡಿಗರನ್ನು ಹೀಯಾಳಿಸುವ ಕೆಲಸ ಮಾಡಬೇಡಿ. ಮಾಧ್ಯಮಗಳ ಎದುರು ಸತ್ಯರಾಜ್ ಕ್ಷಮೆ ಕೇಳಬೇಕಿತ್ತು. ಆದರೂ ವಿಷಾದ ಕೇಳಿದ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸುವುದಿಲ್ಲ ಎಂದು ಹೇಳಿದರು.

ಸತ್ಯರಾಜ್ ಮತ್ತೆ ಏನಾದ್ರೂ ಮಾತನಾಡಿದ್ರೆ, ಕರ್ನಾಟಕದಲ್ಲಿ ಮುಂದೆ ಅವರ ಯಾವ ಚಿತ್ರವೂ ಬಿಡುಗಡೆಯಾಗಲು ಬಿಡುವುದಿಲ್ಲ. ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ತೊಂದರೆ ಆದ್ರೆ ಕರ್ನಾಟಕದಲ್ಲಿ ತಮಿಳು ಸಿನಿಮಾ, ತಮಿಳು ಚಾನಲ್ ಬಂದ್ ಮಾಡಲಾಗುವುದು ವಾಟಾಳ್ ನಾಗರಾಜ್ ತಿಳಿಸಿದರು.

ನಾನು ಕನ್ನಡ ಹಾಗೂ ಕರ್ನಾಟಕದ ವಿರೋಧಿಯಲ್ಲ. ಅಂದಿನ ಹೇಳಿಕೆಗೆ ಇಂದು ಬಾಹುಬಲಿ-2 ಚಿತ್ರಕ್ಕೆ ಅಡ್ಡಿಪಡಿಸಬೇಡಿ ಎಂದು ಕನ್ನಡಿಗರಲ್ಲಿ ಶುಕ್ರವಾರ ಸತ್ಯರಾಜ್ ಮನವಿ ಮಾಡಿದ್ದರು. ಕಾವೇರಿ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಭಾವಾವೇಶದಲ್ಲಿ ಮಾತನಾಡುವಾಗ ಆ ರೀತಿಯ ಹೇಳಿಕೆ ನೀಡಿದ್ದೆ. ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಸತ್ಯರಾಜ್ ಕನ್ನಡಿಗರ ವಿರುದ್ಧ ಮಾತನಾಡಿದ್ದಕ್ಕೆ ಬಾಹುಬಲಿ ಚಿತ್ರದ ಬಿಡುಗಡೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ನಡುವೆ ಗುರುವಾರ ನಿರ್ದೇಶಕ ರಾಜಮೌಳಿ ಅವರು ಕನ್ನಡದಲ್ಲಿ ಮಾತನಾಡಿ ಸತ್ಯರಾಜ್ ಅವರ ಹೇಳಿಕೆಗೂ ಬಾಹುಬಲಿ ಚಿತ್ರ ತಂಡಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ನಮಗೆ ಸಂಬಂಧ ಕಲ್ಪಿಸಬೇಡಿ ಎಂದು ಮನವಿ ಮಾಡಿದ್ದರು.

ಕನ್ನಡ ಸಂಘಟನೆಗಳ ನಾಯಕರು ಬಾಹುಬಲಿ ಚಿತ್ರದ ಬಿಡುಗಡೆಗೆ ವಿರೋಧ ಇಲ್ಲ. ಆದರೆ ಸತ್ಯರಾಜ್ ಹೇಳಿಕೆಯನ್ನು ಖಂಡಿಸಿ ಬಿಡುಗಡೆಯನ್ನು ವಿರೋಧಿಸುತ್ತಿದ್ದೇವೆ. ಸತ್ಯರಾಜ್ ಕ್ಷಮೆ ಕೇಳಿದರೆ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲಿ ಎಂದು ಈ ಹಿಂದೆ ತಿಳಿಸಿದ್ದರು.

https://www.youtube.com/watch?v=DIKSlBk-Rmk

ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿತ್ತು. ಬಿಡುಗಡೆಯಾದ 24 ಗಂಟೆಯಲ್ಲೇ 5 ಕೋಟಿಗೂ ಅಧಿಕ ವ್ಯೂ ಗಳಿಸಿದ ಮೊದಲ ಟ್ರೇಲರ್ ಎಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿತತು.

ಭಾರತದಲ್ಲಿ ಈ ಹಿಂದೆ ರಯೀಸ್ ಟ್ರೇಲರ್ ಬಿಡುಗಡೆಯಾದ 24 ಗಂಟೆಯಲ್ಲಿ 1.19 ಕೋಟಿ ವ್ಯೂ ಕಂಡಿದ್ದರೆ, ದಂಗಲ್ ಚಿತ್ರ 96 ಲಕ್ಷ ವ್ಯೂ ಕಂಡಿತ್ತು.

ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವಿಶ್ವದೆಲ್ಲೆಡೆ ಬಾಹುಬಲಿ ಟ್ರೇಲರ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಜನವರಿ 26ರಂದು ರಾಜಮೌಳಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ನಿಂತುಕೊಂಡು ಬಾಣ ಬಿಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದಕ್ಕೂ ಮೊದಲು ರಾಣಾ ದಗ್ಗುಬಾಟಿ ಮತ್ತು ಪ್ರಭಾಸ್ ಅವರ ಪೋಸ್ಟರ್  ಬಿಡುಗಡೆ ಮಾಡಿದ್ದರು.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ- 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದು ವಿಶ್ವದಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

ಬಾಹುಬಲಿ ದಿ ಬಿಗಿನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

 

 

https://www.youtube.com/watch?v=mYP2ZiDaBFw

https://www.youtube.com/watch?v=6J4v5wDplP8

Comments

Leave a Reply

Your email address will not be published. Required fields are marked *