ಚೇತನ್ ಫೈರ್ ಸಂಸ್ಥೆಯಿಂದ ಎಕ್ಸಿಟ್ ಆಗಿದ್ದಕ್ಕೆ ಕಾರಣ ತಿಳಿಸಿದ್ರು ಪ್ರಿಯಾಂಕ

ಬೆಂಗಳೂರು: ಫೈರ್ ಸಂಸ್ಥೆ ಕೆಲಸ ಮಾಡುವ ರೀತಿ ನನಗೆ ಇಷ್ಟವಾಗುತ್ತಿರಲಿಲ್ಲ. ನಾನು 6 ತಿಂಗಳ ಹಿಂದೆಯೇ ಸಂಸ್ಥೆ ಬಿಡಲು ಯೋಚಿಸುತ್ತಿದ್ದೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ವಿದೇಶದಲ್ಲಿ ಇರುವಾಗ ಚೇತನ್ ಫೈರ್ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದಾರೆ. ಇದು ನನಗೆ ಬಹಳ ನೋವಾಗಿದೆ. ಹೀಗಾಗಿ ನಾನು ಫೈರ್ ಸಂಸ್ಥೆಯಿಂದ ಹೊರಗಡೆ ಬಂದಿದ್ದೇನೆ ಎಂದು ತಿಳಿಸಿದರು.

ಫೈರ್ ಉದ್ದೇಶ ಚೆನ್ನಾಗಿದೆ ಎನ್ನುವ ಕಾರಣಕ್ಕೆ ನಾನು ಸೇರಿದ್ದೆ. ಯಾವುದೇ ಸಮಸ್ಯೆಯಾದಾಗ ಮೊದಲು ನಮ್ಮಲ್ಲಿ ಚರ್ಚೆಯಾಗಿ ಅದನ್ನು ಬಗೆ ಹರಿಸುವ ಪ್ರಯತ್ನ ಮಾಡಬೇಕಿತ್ತು. ಒಂದು ವೇಳೆ ನಾಲ್ಕು ಗೋಡೆಯ ಮಧ್ಯೆ ಪರಿಹಾರವಾಗದೇ ಇದ್ದಾಗ ಕೋರ್ಟ್, ಮಾಧ್ಯಮದ ಮುಂದೆ ಹೋಗಬೇಕು. ಆದರೆ ಈ ಪ್ರಕರಣದಲ್ಲಿ ಆರಂಭದಲ್ಲೇ ಮಾಧ್ಯಮಕ್ಕೆ ಹೋಗಿದ್ದು ಸರಿ ಕಾಣಲಿಲ್ಲ. ಈ ಕಾರಣಕ್ಕೆ ನಾನು ಫೈರ್ ನಿಂದ ಹೊರ ಬಂದಿದ್ದೇನೆ ಎಂದು ವಿವರಿಸಿದರು.

ನಾನು ಶ್ರೀಲಂಕಾದಲ್ಲಿ ಇದ್ದಾಗಲೇ ಫೈರ್ ಕುರಿತಂತೆ ಕರೆಗಳು ಬಂದಿತ್ತು. ನಮಗೆ ತಿಳಿಯದೇ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ನನ್ನ ಜೊತೆ ಇನ್ನು ಕೆಲವರು ಹೊರ ಫೈರ್ ನಿಂದ ಹೊರ ಬಂದಿದ್ದಾರೆ ಎಂದು ತಿಳಿಸಿದರು.

ಮೀಟೂ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಮೀಟೂ ಒಂದು ಉತ್ತಮ ವೇದಿಕೆ. ಇನ್ನು ಮುಂದೆಯಾದರೂ ಈ ರೀತಿಯ ಕಿರುಕುಳಗಳು ಆಗದಂತೆ ತಡೆಯಬಹುದು. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ನನಗೆ ಪರಿಚಯ. ಈ ಪ್ರಕರಣದಲ್ಲಿ ನಾನು ಯಾರ ಪರ ಇಲ್ಲ. ಇಬ್ಬರು ಆರೋಪ ಮಾಡಿದ್ದಾರೆ. ಕೋರ್ಟ್ ಏನು ಹೇಳುತ್ತದೋ ಆ ತೀರ್ಪಿಗೆ ನಾನು ಬದ್ಧ. ತಿಳಿಯದ ವಿಚಾರಗಳಿಗೆ ಪ್ರತಕ್ರಿಯಿಸುವುದಿಲ್ಲ ಎಂದರು.

ಮುಂದೆ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ಉಪ್ಪಿ ಫೌಂಡೇಶನ್ ಇದೆ. ಪ್ರಜಾಕೀಯ ಇದೆ. ಅದರಲ್ಲೂ ಸಮಾಜ ಕಾರ್ಯ ಮಾಡಬಹುದು ಎಂದು ಉತ್ತರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *