ಪ್ರಿಯಾಂಕ ಮಕ್ಕಳು ‘ಗರೀಬಿ ಹಠಾವೋ’ದ ಮುಂದಿನ ಹೋರಾಟಗಾರರು: ಯುಪಿ ಡಿಸಿಎಂ ವ್ಯಂಗ್ಯ

ಲಕ್ನೋ: ಉತ್ತರ ಪ್ರದೇಶ ಪೂರ್ವದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮಕ್ಕಳು ‘ಗರೀಬಿ ಹಠಾವೋ’ದ ಮುಂದಿನ ಹೋರಾಟಗಾರರು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಬಿಜೆಪಿ ಪ್ರಚಾರದಲ್ಲಿ ಮಾತನಾಡಿದ ಡಿಸಿಎಂ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದು ಹೇಳಿ ಹೊಸ ಆಂದೋಲವನ್ನೇ ಸೃಷ್ಟಿಸಿದರು. ಅದನ್ನು ಪುತ್ರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮುಂದುವರಿಸಿಕೊಂಡು ಅಧಿಕಾರಕ್ಕೆ ಬಂದರು. ಹೀಗಾಗಿ ಪ್ರಿಯಾಂಕಾ ಗಾಂಧಿ ಅವರ ಮಕ್ಕಳು ಕೂಡ ಗರೀಬಿ ಹಠಾವೋ ಎಂದು ಹೇಳಿಯೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ದೇಶದಲ್ಲಿ ಬಡತನ ಇಲ್ಲವಾಗಿದೆಯೇ? ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಹೆಚ್ಚು ಕಾಲ ಅಧಿಕಾರದಲ್ಲಿತ್ತು. ಕಾಂಗ್ರೆಸ್‍ನವರು ಗರೀಬಿ ಹಠಾವೋ ಎಂದು ಹೇಳಿದರೇ ಹೊರತು ಬಡತನವನ್ನು ತೊಲಗಿಸಲಿಲ್ಲ. ದೇಶದಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1971ರಲ್ಲಿ ಗರೀಬಿ ಹಠಾವೋ ಅಭಿಯಾನ ಆರಂಭಿಸಿದರು. ಈ ಮೂಲಕ 1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 352 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದಿತ್ತು. ರಾಜೀವ್ ಗಾಂಧಿ ಅವರು ಕೂಡ ಗರೀಬಿ ಹಠಾವೋ ಅಭಿಯಾನವನ್ನು ಮುಂದುವರಿಸಿ ಪ್ರಧಾನಿಯಾಗಿದ್ದರು.

Comments

Leave a Reply

Your email address will not be published. Required fields are marked *