ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

– ನಾನು ಮನೆಯಿಂದ ಹೊರಗೆ ಕಾಲಿಟ್ಟು ಅಪರಾಧ ಮಾಡುತ್ತಿಲ್ಲ

ಲಕ್ನೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಹರ್‍ಗಾಂವ್ ನಲ್ಲಿ ಬಂಧಿಸಲಾಗಿದೆ. ಈ ವೇಳೆ ನೀವು ಯಾವ ಸರ್ಕಾರದ ಪರವಾಗಿ ನಿಂತಿದ್ದೀರೋ ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ ಎಂದು ಪೊಲೀಸರ ಜೊತೆಗೆ ಪ್ರಿಯಾಂಕಾ ವಾಗ್ವಾದ ಮಾಡಿದ್ದಾರೆ.

ಪ್ರಿಯಾಂಕಾ ಹರ್‍ಗಾಂವ್ ತಲುಪಿದ ತಕ್ಷಣ ಅವರಿಗೆ ತಡೆಯೊಡ್ಡಲಾಯಿತು. ಪ್ರಿಯಾಂಕಾ ಮತ್ತು ಉತ್ತರಪ್ರದೇಶ ಪೊಲೀಸ್ ನಡುವೆ ಸಣ್ಣ ಜಗಳ ನಡೆದು ಪ್ರಿಯಾಂಕಾ ಬಂಧನ ವಾರಂಟ್ ತೋರಿಸಿ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ವಾಗ್ವಾದದ ವೀಡಿಯೋವನ್ನು ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ ಇದನ್ನೂ ಓದಿ:  ವೀಡಿಯೋ- ಕೈ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

ವೀಡಿಯೋದಲ್ಲಿ ಏನಿದೆ?
ನೀವು ಯಾವ ಸರ್ಕಾರದ ಪರವಾಗಿ ನಿಂತಿದ್ದೀರೋ ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ. ಅವರ ಮೇಲೆ ವಾಹನ ಹರಿದಿದೆ. ನಾನು ಅವರಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ನಾನು ಮನೆಯಿಂದ ಹೊರಗೆ ಕಾಲಿಟ್ಟು ಅಪರಾಧ ಮಾಡುತ್ತಿಲ್ಲ. ನಾನು ಕೇವಲ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ದುಃಖವನ್ನು ಆಲಿಸಲು ಬಯಸುತ್ತೇನೆ. ನಾನು ಏನು ತಪ್ಪು ಮಾಡುತ್ತಿದ್ದೇನೆ? ನಾನು ಏನಾದರೂ ತಪ್ಪು ಮಾಡಿದ್ದರೆ, ನೀವು (ಯುಪಿ ಪೊಲೀಸ್) ಆದೇಶ, ವಾರಂಟ್ ಹೊಂದಿರಬೇಕು. ನೀವು (ಯುಪಿ ಪೊಲೀಸ್) ನನ್ನನ್ನು, ನನ್ನ ಕಾರನ್ನು ನಿಲ್ಲಿಸುತ್ತಿದ್ದೀರಿ, ಆದರೆ ಯಾವ ಕಾರಣಕ್ಕಾಗಿ? ಎಂದು ಹಿಂದಿಯಲ್ಲಿ ಪ್ರಿಯಾಂಕಾ ವಾಗ್ವಾದ ಮಾಡಿದ್ದಾರೆ.

ನಂತರ ಪೊಲೀಸ್ ಸಿಬ್ಬಂದಿ ಆಕೆಯನ್ನು ವಶಕ್ಕೆ ತೆಗೆದುಕೊಂಡು ಪಿಎಸಿ ಕಚೇರಿಗೆ ಕರೆತಂದರು. ಪ್ರಿಯಾಂಕಾ ಜೊತೆಗಿದ್ದ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ಮೂಲಕ ಆಕೆಯ ಬಂಧನವನ್ನು ವಿರೋಧಿಸಿದರು.

ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಭಾರತದ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವವು ನಶಿಸಿಹೋಗಿದೆ ಎಂಬುದನ್ನು ಪ್ರಿಯಾಂಕಾ ಬಂಧನವು ಸಾಬೀತುಪಡಿಸಿದೆ. ನಾವು ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದೇವೆ ಮತ್ತು ಇಂತಹ ದಮನಕಾರಿ ಕ್ರಮಗಳಿಂದ ನಾವು ಹತಾಶರಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

ಹಿನ್ನೆಲೆ:
ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದು ಅಲ್ಲಿಗೆ ಭೇಟಿ ನೀಡಲು ಪ್ರಿಯಾಂಕಾ ಹೋಗುತ್ತಿದ್ದ ವೇಳೆ ಪೊಲೀಸರು ತಡೆದಿದ್ದಾರೆ. ಭಾನುವಾರದ ಘಟನೆಯ ನಂತರ ಲಖಿಂಪುರ್ ಖೇರಿಗೆ ಹೋಗುತ್ತಿರುವ ಹಲವಾರು ವಿರೋಧ ಪಕ್ಷದ ನಾಯಕರನ್ನು ತಡೆಯಲಾಗಿದೆ. ಪ್ರಿಯಾಂಕಾ ಗಾಂಧಿ ಲಕ್ನೋಗೆ ಭೇಟಿ ನೀಡಿದಾಗ, ಆಕೆಯ ಬೆಂಗಾವಲು ವಾಹನಕ್ಕೆ ತಡೆಯೊಡ್ಡಲಾಯಿತು. ಪ್ರಿಯಾಂಕಾ ಲಕ್ನೋಗೆ ಭೇಟಿ ನೀಡಿದಾಗ ತಂಗಿದ್ದ ಕೌಲ್ ಹೌಸ್ ಅನ್ನು ಉತ್ತರ ಪ್ರದೇಶ ಪೊಲೀಸರು ಸುತ್ತುವರಿದರು. ಪ್ರಿಯಾಂಕಾ ಪೊಲೀಸರ ಕಣ್ತಪ್ಪಿಸಿ ತನ್ನ ನಿವಾಸದಿಂದ ಪಕ್ಕದ ಗೇಟ್ ಮೂಲಕ ಹೊರ ಬಂದು ಕಾರು ಹತ್ತಿದ್ದರು. ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾ, ಪ್ರಿಯಾಂಕಾ ಅವರನ್ನು ಕಾರಿನಲ್ಲಿ ಲಖಿಂಪುರ್ ಖೇರಿಗೆ ಕರೆದೊಯ್ದಿದ್ದಾರೆ.

Comments

Leave a Reply

Your email address will not be published. Required fields are marked *