ನಿಮ್ಮ ಮತಗಳೇ ನಮಗೆ ಆಯುಧ – ಮೋದಿ ತವರಲ್ಲಿ ಪ್ರಿಯಾಂಕ ಭಾಷಣ

– ನಿಮ್ಮ ಭವಿಷ್ಯಕ್ಕಾಗಿ ಮತ ಚಲಾವಣೆ ಮಾಡಿ
– 2 ಕೋಟಿ ಉದ್ಯೋಗ ಎಲ್ಲಿ?

ಅಹಮದಬಾದ್: ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮೊದಲ ಬಾರಿಗೆ ಪ್ರಧಾನಿ ಮೋದಿ ತವರಲ್ಲಿಯೇ ತಮ್ಮ ಮೊದಲ ರಾಜಕೀಯ ಭಾಷಣ ಮಾಡಿದ್ದಾರೆ. ಗುಜರಾತಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಿಯಾಂಕ ಗಾಂಧಿ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನೆ ಮಾಡಿ ಟೀಕಿಸಿದರು.

ನನ್ನ ಮನಸ್ಸಿನಲ್ಲಿರುವ ಎರಡು ಮಾತುಗಳನ್ನು ನಿಮ್ಮ ಮುಂದೆ ಇರಿಸಲು ಇಚ್ಛಿಸುತ್ತೇನೆ. ಮೊದಲ ಬಾರಿಗೆ ನಾನು ಗುಜರಾತಿಗೆ ಬಂದಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಕಂಡು ಭಾವುಕಳಾಗಿದ್ದೇನೆ. ಸಬರಮತಿ ಆಶ್ರಮದಲ್ಲಿಯ ಮರಗಳ ಕೆಳಗೆ ಕುಳಿತು ಭಜನೆ ಕೇಳಿದ್ರೆ, ದೇಶಕ್ಕಾಗಿ ಮಡಿದ ವೀರ ದೇಶಭಕ್ತರು ನೆನಪಾಗುತ್ತಾರೆ. ಭಾರತ ಪ್ರೀತಿ, ಮಾನವೀಯತೆ, ಸದ್ಭಾವನೆಗಳ ಆಧಾರದಲ್ಲಿ ನಿರ್ಮಾಣವಾಗಿದೆ. ಆದ್ರೆ ಇಂದು ನಮ್ಮ ದೇಶದ ಸ್ಥಿತಿ ನೋಡಿದ್ರೆ ನನಗೆ ಬೇಸರವಾಗುತ್ತಿದೆ. ನೀವು ಜಾಗರೂಕರಾದರೆ ಇದಕ್ಕಿಂತ ದೊಡ್ಡ ದೇಶಭಕ್ತಿ ಯಾವುದು ಇಲ್ಲ. ನಿಮ್ಮ ಮತ ಒಂದು ಆಯುಧವಾಗಿದ್ದು, ಅದು ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ನಿಮ್ಮ ಬಳಿಯಿರುವ ಮತ ಎಂಬ ಆಯುಧ ಯಾರಿಗೂ ನೋವುಂಟು ಮಾಡಲ್ಲ. ಈ ಬಾರಿ ನೀವು ಅತ್ಯಂತ ಜಾಗೂರಕರಾಗಿ ನಿಮ್ಮ ಮತವನ್ನು ಚಲಾಯಿಸಬೇಕು. ಕೇವಲ ಓರ್ವ ವ್ಯಕ್ತಿಯನ್ನು ನೀವು ಆಯ್ಕೆ ಮಾಡಲ್ಲ. ನಿಮ್ಮ ಭವಿಷ್ಯಕ್ಕಾಗಿ ಮತ ಹಾಕಬೇಕಾಗಿದ್ದು, ನಿಮ್ಮ ಬಳಿಯಿರುವ ಆಯುಧವನ್ನು ಬೇರೆಯವರ ಪಾಲಾಗದಂತೆ ಕಾಯ್ದುಕೊಳ್ಳಬೇಕಿದೆ.

ಬಿಜೆಪಿಗೆ ಮೂರು ಪ್ರಶ್ನೆ:
ಕೆಲವರು ನಿಮ್ಮ ಮುಂದೆ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಇನ್ನೊಮ್ಮೆ ನಿಮ್ಮ ಮುಂದೆ ಮತ ಕೇಳಲು ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದನ್ನು ತೋರಿಸಿ ಎಂದು ಧೈರ್ಯವಾಗಿ ಕೇಳಿ. ನಿಮ್ಮೆಲ್ಲರ ಖಾತೆಗೆ ಬರುತ್ತೆ ಅಂತಾ 15 ಲಕ್ಷ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿ. ಮಹಿಳಾ ಸುರಕ್ಷತೆಗೆ ಮಾತನಾಡುವ ಕೆಲವರು ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನೀವೆಲ್ಲರು ಕೇಳಬೇಕೆಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ಮುಂಬರುವ ಎರಡು ತಿಂಗಳಲ್ಲಿ ಹಲವು ವಿಚಾರಗಳ ಜೊತೆ ನಿಮ್ಮ ಮುಂದೆ ಬರುತ್ತಾರೆ. ನೀವು ಯಾವುದೇ ನಿರ್ಣಯ ತೆಗೆದುಕೊಂಡರೂ ಯೋಚಿಸಿ, ಚರ್ಚಿಸಿ ತೆಗೆದುಕೊಳ್ಳಬೇಕಿದೆ. ಯಾರನ್ನು ನೀವು ಆಯ್ಕೆ ಮಾಡಬೇಕು ಎಂಬ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಮತದಾನ ಮಾಡುವ ಮೂಲಕ ನಿಮ್ಮ ದೇಶಭಕ್ತಿಯನ್ನು ತೋರಿಸಿ. ಸ್ವತಂತ್ರಕ್ಕಾಗಿ ಗಾಂಧೀಜಿ ಇಲ್ಲಿಂದಲೇ ಮುಂದಾಗಿದ್ದರು. ಹಾಗಾಗಿ ನಾವು ಸಹ ಇಲ್ಲಿಂದಲೇ ಧ್ವನಿ ಎತ್ತುತ್ತಿದ್ದೇವೆ. ನೀವು ಈ ದೇಶವನ್ನು ನಿರ್ಮಾಣ ಮಾಡಿದ್ದು, ಬೇರೆ ಯಾರದ್ದು ಅಲ್ಲ. ನಿಮ್ಮ ದೇಶಕ್ಕಾಗಿ ನೀವು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

ಪ್ರಿಯಾಂಕ ಗಾಂಧಿ ಅವರ ಭಾಷಣ ಯುವ ಸಮುದಾಯ, ಮಹಿಳೆ ರಕ್ಷಣೆ ಮತ್ತು ರೈತರ ಅಭಿವೃದ್ಧಿಯ ವಿಷಯಗಳನ್ನು ಒಳಗೊಂಡಿತ್ತು. ಈ ವಿಷಯಗಳ ಹೊರತಾಗಿ ಬೇರೆ ಯಾವುದರ ಬಗ್ಗೆ ಪ್ರಿಯಾಂಕ ಗಾಂಧಿ ಹೆಚ್ಚು ಮಾತನಾಡಲಿಲ್ಲ.

ಜನವರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಪ್ರಿಯಾಂಕರನ್ನು ಪೂರ್ವ ಉತ್ತರ ಪ್ರದೇಶದ ಕಾರ್ಯ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಇಂದು ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *