ಭಾರತೀಯರಲ್ಲಿ ಕ್ಷಮೆ ಕೇಳಿದ ಪ್ರಿಯಾಂಕಾ ಚೋಪ್ರಾ

ನವದೆಹಲಿ: ಕ್ವಾಂಟಿಕೋ ಸಂಚಿಕೆಯಲ್ಲಿ ಉದ್ದೇಶ ಪೂರ್ವಕವಾಗಿ ಭಾರತೀಯರನ್ನು ಹಿಂದೂ ಉಗ್ರಗಾಮಿಗಳೆಂದು ಬಿಂಬಿಸಿಲ್ಲ. ಈ ಅಹಿತಕರ ಬೆಳವಣಿಗೆಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಟ್ವಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕ ಎಬಿಸಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕ್ವಾಂಟಿಕೋದಲ್ಲಿ ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರವರು ಅಭಿನಯಿಸಿದ್ದಾರೆ. ಹೀಗಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ “ನನ್ನ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಭಾರತೀಯರ ಭಾವನೆಗೆ ಧಕ್ಕೆ ತರುವ ಸನ್ನಿವೇಶ ದುಃಖ ತಂದಿದೆ. ಉದ್ದೇಶ ಪೂರ್ವಕವಾಗಿ ಹಾಗೇ ಬಿಂಬಿಸಿಲ್ಲ. ಈ ಅಹಿತಕರ ಘಟನೆಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ. ಅಲ್ಲದೇ ನಾನು ಎಂದೆಂದಿಗೂ ಭಾರತೀಯಳು. ಭಾರತೀಯಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ:  ಪ್ರಿಯಾಂಕ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ಹಿಂದೂಗಳಿಗೆ ಉಗ್ರ ಪಟ್ಟ: ಕ್ಷಮೆ ಕೇಳಿದ ಅಮೆರಿಕಾ ಟಿವಿ ಮಾಧ್ಯಮ!

ಕ್ವಾಂಟಿಕೋ ಸಂಚಿಕೆಯಲ್ಲಿ ಪ್ರಿಯಾಂಕಾ ಚೋಪ್ರಾರವರು ಎಫ್‍ಬಿಐನ ಏಜೆಂಟ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಕಳೆದ ವಾರ ಬಿಡುಗಡೆಗೊಂಡ ಸಂಚಿಕೆಯಲ್ಲಿ ಭಾರತೀಯರನ್ನು ಹಿಂದೂ ಉಗ್ರರೆಂದು ಬಿಂಬಿಸಲಾಗಿತ್ತು. ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧವೂ ಟ್ವೀಟರ್ ನಲ್ಲಿ ಭಾರೀ ಟೀಕೆಗಳು ಕೇಳಿಬಂದಿದ್ದವು.

ಹಣಕ್ಕೋಸ್ಕರ ಭಾರತೀಯರನ್ನು ಅವಮಾನಿಸುವ ಕೃತ್ಯಕ್ಕೆ ಕೈ ಹಾಕಿದ್ದಿರಿ, ಇಂತಹ ಪಾತ್ರಗಳಲ್ಲಿ ಅಭಿನಯಿಸುವ ನಿಮಗೆ ನಾಚಿಕೆಯಾಗಬೇಕು ಎಂದು ಆರೋಪಿಸಿ, ಕೂಡಲೇ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನ ಎಬಿಸಿ ಸಂಸ್ಥೆ “ಸಂಚಿಕೆಯಲ್ಲಿ ಬರುವ ಸನ್ನಿವೇಶಕ್ಕೂ ನಟಿ ಪ್ರಿಯಾಂಕ ಚೋಪ್ರಾಗೂ ಯಾವುದೇ ಸಂಬಂಧವಿಲ್ಲ, ಕೇವಲ ಅವರು ಪಾತ್ರ ನಿರ್ವಹಿಸಿದ್ದಾರೆ.” ಅಲ್ಲದೇ ಸಂಚಿಕೆಯ ಯಾವುದೇ ತಯಾರಿಯಲ್ಲಿ ಅವರು ಭಾಗವಹಿಸಿಲ್ಲ. ಭಾರತೀಯರ ಭಾವನೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಾವು ಕ್ಷಮೆಯಾಚಿಸುತ್ತಿದ್ದೇವೆ ಎಂದು ಕ್ಷಮೆ ಕೇಳಿದ್ದರು.

Comments

Leave a Reply

Your email address will not be published. Required fields are marked *