ಕೊಡಗಿಗೆ ಬಂದಿಳಿದ ಕಣ್ಸನ್ನೆ ಬೆಡಗಿ!

ಕೊಡಗು: ಒರು ಅಡಾರ್ ಲವ್ ಎಂಬ ಮಲೆಯಾಳಂ ಚಿತ್ರದ ಒಂದು ದೃಶ್ಯದ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಫೇಮಸ್ ಆದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಆ ಚಿತ್ರ ತೆರೆ ಕಂಡು ಅದು ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನಲ್ಲಿ ಕನ್ನಡದಲ್ಲಿಯೂ ಬಿಡುಗಡೆಯಾಗಿ ಹೋಗಿದೆ. ಆ ಚಿತ್ರ ಹೇಳಿಕೊಳ್ಳುವಂಥಾ ಗೆಲುವು ದಾಖಲಿಸದಿದ್ದರೂ ಪ್ರಿಯಾಗೆ ನಟಿಯಾಗಿ ಇರೋ ಬೇಡಿಕೆ, ಆಕೆಯೆಡೆಗಿರೋ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ. ಪ್ರಿಯಾ ವಿಷ್ಣುಪ್ರಿಯಾ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ಅವರೀಗ ಏಕಾಏಕಿ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಾರೆ!

ಹಾಗಂತ ವಿಷ್ಣುಪ್ರಿಯಾ ಚಿತ್ರದ ಚಿತ್ರೀಕರಣ ಆರಂಭವಾಗಿದೆ, ಪ್ರಿಯಾ ಆ ಕಾರಣದಿಂದಲೇ ಕೊಡಗಿಗೆ ಬಂದಿದ್ದಾರೆ ಅಂದುಕೊಳ್ಳಬೇಕಿಲ್ಲ. ಪ್ರಿಯಾ ಬಂದಿರೋದು ವಿಹಾರಕ್ಕಾಗಿಯಷ್ಟೇ. ಹೀಗೆ ಕಣ್ಣೇಟಿನ ಸುಂದರಿ ಕೊಡಗಿನ ಸುಂದರ ತಾಣಗಳಲ್ಲಿ ಓಡಾಡುತ್ತಾ ಶಾಪಿಂಗ್ ಮಾಡಲಾರಂಭಿಸಿದ್ದೇ ಜನರೆಲ್ಲ ಗುರುತು ಹಿಡಿದು ಮುಗಿಬಿದ್ದಿದ್ದಾರೆ. ಪ್ರಿಯಾ ಎಲ್ಲರೊಂದಿಗೂ ಚೆಂದಗೆ ಮಾತಾಡಿ, ಅಭಿಮಾನಿಗಳ ಸೆಲ್ಫಿ ಸಂಭ್ರಮಕ್ಕೆ ಮನಸಾರೆ ಸಹಕರಿಸಿ ಖುಷಿಗೊಂಡಿದ್ದಾರೆ.

ಒರು ಅಡಾರ್ ಲವ್ ಎಂಬ ಚಿತ್ರದ ನಂತರ ಪ್ರಿಯಾ ವಾರಿಯರ್ ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದರು. ಶ್ರೀದೇವಿ ಬಂಗ್ಲೊ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸಲು ತಯಾರಾಗಿದ್ದರಾದರೂ ಆರಂಭದಲ್ಲಿಯೇ ವಿವಾದವೆದ್ದು ಆ ಚಿತ್ರ ತಾತ್ಕಾಲಿಕವಾಗಿ ನಿಂತು ಹೋಗಿದೆ. ಇದೀಗ ಅವರು ಕನ್ನಡದತ್ತ ಮುಖ ಮಾಡಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯದಲ್ಲಿ ಅವರು ನಾಯಕಿಯಾಗಿ ನಟಿಸೋದು ಬಹುತೇಕ ಖಚಿತಗೊಂಡಿದೆ. ಅದಕ್ಕೂ ಮುಂಚೆಯೇ ಪ್ರಿಯಾ ವಾರಿಯರ್ ಕೊಡಗಿನ ಸುಂದರ ತಾಣಗಳಲ್ಲಿ ಒಂದು ರೌಂಡು ಹಾಯಾಗಿ ವಿಹಾರ ನಡೆಸಿದ್ದಾರೆ. ಜೊತೆಗೆ ತನ್ನ ಬ್ರ್ಯಾಂಡ್ ಆಗಿರೋ ಕಣ್ಸನ್ನೆಯನ್ನೂ ಅಭಿಮಾನಿಗಳಿಗೆ ತೋರಿಸಿದ್ದಾರೆ.

Comments

Leave a Reply

Your email address will not be published. Required fields are marked *