ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ

ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರದ ವಿರುದ್ಧ ಇಂದು ಮುಷ್ಕರಕ್ಕೆ ಇಳಿದಿದ್ದಾರೆ.

ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಕಳೆದ ಜುಲೈನಲ್ಲಿ ಮುಷ್ಕರಕ್ಕೆ ಇಳಿದಿದ್ದ ವೈದ್ಯರು ಈಗ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಹೊರಟ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಚಿಕ್ಕ ಕ್ಲಿನಿಕ್‍ನಿಂದ ಹಿಡಿದು ಕಾರ್ಪೊರೇಟ್ ಆಸ್ಪತ್ರೆಗಳು ಇಂದು ಬಂದ್ ಆಗಲಿವೆ. ಒಪಿಡಿ, ಒಟಿ ಸಂಪೂರ್ಣ ಸ್ಥಗಿತವಾಗಲಿದೆ. ಕೇವಲ ಆಕ್ಸಿಡೆಂಟ್ ಹಾಗೂ ಗರ್ಭಿಣಿಯರ ಕೇಸ್ ಮಾತ್ರ ಆಟೆಂಡ್ ಮಾಡೋದಾಗಿ ವೈದ್ಯರು ಹೇಳಿದ್ದಾರೆ.

ಚಿಕಿತ್ಸೆ ವಿಫಲವಾದ್ರೆ ವೈದ್ಯರನ್ನು ಜೈಲಿಗಟ್ಟುವ ಕಾಯ್ದೆ ಹಾಗೂ ದಂಡ ಪ್ರಯೋಗಕ್ಕೆ ವಿರೋಧ. ಜಿಲ್ಲಾಮಟ್ಟದಲ್ಲಿ ಮತ್ತೆ ಕುಂದು ಕೊರತೆ ಪರಿಹಾರ ಸಮಿತಿ ಸ್ಥಾಪನೆಗೆ ವಿರೋಧ. ಚಿಕಿತ್ಸಾ ದರವನ್ನು ಸರ್ಕಾರವೇ ನಿಗಧಿ ಮಾಡುವ ನಿರ್ಧಾರ – ಈ ಎಲ್ಲಾ ನೀತಿಗಳ ವಿರುದ್ಧ ನಾವು ಮುಷ್ಕರ ಮಾಡುತ್ತೇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ರವೀಂದ್ರ ತಿಳಿಸಿದ್ದಾರೆ.

ವೈದ್ಯರ ಪ್ರತಿಭಟನೆ ಕುರಿತಂತೆ ಮಾತಾನಾಡಿದ ಸಿಎಂ ಸಿದ್ದರಾಮಯ್ಯ, ವೈದ್ಯರು ಮುಷ್ಕರ ಮಾಡೋದು ಸರಿಯಲ್ಲ. ಈಗಾಗಲೇ ಅವರ ಜೊತೆ ಮಾತನಾಡಿದ್ದೇವೆ. ಮುಷ್ಕರ ಮಾಡೋದು ಸರಿಯಾದ ಕ್ರಮವಲ್ಲ. ಅವಶ್ಯಕತೆ ಇದ್ದರೆ ಮತ್ತೊಂದು ಸಾರಿ ವೈದ್ಯರ ಜೊತೆ ಮಾತನಾಡುತ್ತೇನೆ. ಬಡವರಿಗೆ ಅನುಕೂಲವಾಗಲಿ ಎಂದು ಬಿಲ್ ವ್ಯವಸ್ಥೆಯನ್ನು ತರಲಾಗುತ್ತಿದೆ. ಆದ್ದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇಂದು ವೈದ್ಯರ ಮುಷ್ಕರದಿಂದ ಸಾಕಷ್ಟು ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *