ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

ವಿಜಯಪುರ: ಸೈನ್ಯ ಸೇರ್ಪಡೆಗೆ ಯುವಜನತೆಯನ್ನು ಪ್ರೇರೇಪಿಸಲು ಹಾಗೂ ದೇಶಸೇವೆಯಂತಹ ಪವಿತ್ರ ಕಾರ್ಯಕ್ಕೆ ಅಣಿಗೊಳಿಸುವ ಉದ್ದೇಶದಿಂದ ಸೈನಿಕ ಶಾಲೆಯ ಪ್ರಾಚಾರ್ಯರೊಬ್ಬರು ಸುದೀರ್ಘ 700 ಕಿಮೀ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಮುಕುಟ ಪ್ರಾಯವಾಗಿರುವ ವಿಜಯಪುರದಲ್ಲಿರುವ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ ಅವರು ಇಂಥದ್ದೊಂದು ಪ್ರೇರಣಾತ್ಮಕ ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ. ಇವರು ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಗೇಟಿನವರೆಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

ವಿಜಯಪುರದಿಂದ ಆರಂಭವಾಗಿ ಕೊಡಗಿನವರೆಗೆ ತಮೋಜಿತ್ ಬಿಸ್ವಾಸ್ ಪ್ರಯಾಣಿಸಲಿದ್ದು, ನಿಗದಿತ ಅವಧಿಯೊಳಗೆ ಸುಮಾರು ಆರು ಜಿಲ್ಲೆಗಳ ಮೂಲಕ 700 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇವರು ದಿನಕ್ಕೆ 200 ಕಿಮೀ ಪೆಡಲ್ ತುಳಿಯುವ ದೃಢ ನಿರ್ಧಾರ ಮಾಡಿ, ಆಲಮಟ್ಟಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕನಾಯಕನಹಳ್ಳಿ, ಹೊಳೆನರಸೀಪುರ ಮಾರ್ಗವಾಗಿ ಪ್ರಯಾಣಿಸಿ ಅಕ್ಟೋಬರ್ 31 ರಂದು ಕೊಡಗಿನ ಸೈನಿಕ ಶಾಲೆಗೆ ತಲುಪಲಿದ್ದಾರೆ. ಇನ್ನು ಮಾರ್ಗಮಧ್ಯೆ ಸಿಗುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೆಲಕಾಲ ಸಮಯ ಕಳೆದು ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ದೇಶಸೇವೆಯ ಪವಿತ್ರ ಕಾರ್ಯ ನಿರ್ವಹಿಸಲು ಪ್ರೇರೇಪಿಸಲಿದ್ದಾರೆ.

ದೇಶಸೇವೆ ಅತ್ಯಂತ ಪುಣ್ಯದ ಕಾರ್ಯ. ಇತ್ತೀಚಿನ ಶಿಕ್ಷಣ ಪದ್ಧತಿ ಎಂದರೆ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಗಳಿಸುವುದು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಿಜವಾದ ಶಿಕ್ಷಣ ಎಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸನವಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆದು ರಾಷ್ಟ್ರ ಪ್ರೇಮದ ಬಗ್ಗೆ ಆ ಶಕ್ತಿಯನ್ನು ಮೂಡಿಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರು ಇಂದಿನಿಂದಲೇ ಕನಸು ಕಾಣಿ, ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಬೇಕೆಂದು ತಮೋಜಿತ್ ಬಿಸ್ವಾಸ್ ಹೇಳಿದ್ದಾರೆ.


Comments

Leave a Reply

Your email address will not be published. Required fields are marked *