ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್

ಮೈಸೂರು: ಯದುವಂಶದ ಸಂಪ್ರದಾಯದಂತೆ ಯುವರಾಜನ ನಾಮಕರಣ ಅರಮನೆಯಲ್ಲಿ ನಡೆಯಲಿದೆ ಎಂದು ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಯದುವೀರ್, ನಮ್ಮ ಸಂಪ್ರದಾಯದಂತೆ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಅರಮನೆಯ ಮೂಹೂರ್ತ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ. ಹಲವು ಹೆಸರುಗಳನ್ನು ಯೋಚನೆ ಮಾಡಿದ್ದು, ಯಾವ ಹೆಸರನ್ನು ಅಧಿಕೃತ ಮಾಡಿಲ್ಲ. ಮಗನ ಎಲ್ಲಾ ಕಾರ್ಯಕ್ರಮಗಳು ಅರಮನೆಯಲ್ಲೇ ನಡೆದರೆ ನಮಗೆ ಇನ್ನಷ್ಟು ಖುಷಿ ಸಿಗಲಿದೆ ಎಂದು ತಿಳಿಸಿದ್ರು.

ಸದ್ಯ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ ಯದುವೀರ್, ನಾಮಕರಣದ ಉಹಾಪೋಹಗಳಿಗೆ ತೆರೆ ಎಳೆದರು.

ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. 2017ರ ಡಿಸೆಂಬರ್ 06ರಂದು ರಾತ್ರಿ 9.50 ಕ್ಕೆ ರಾಣಿ ತ್ರಿಷಿಕಾ ಕುಮಾರಿ ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು ಎಂದು ಹೇಳಲಾಗಿತ್ತು.

Comments

Leave a Reply

Your email address will not be published. Required fields are marked *