ಪ್ರಧಾನಿ ಮೋದಿಯಿಂದ ನನಸಾಗಲಿದೆ ಮಾಯಾವತಿ ಕನಸು!

ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಡಿಗಲ್ಲು ಹಾಕಲಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳಲ್ಲಿ ಒಬ್ಬರಾಗಿರುವ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರ ಕನಸನ್ನು ನನಸು ಮಾಡಲು ಮುಂದಾಗಲಿದ್ದಾರೆ.

ಸಂತ ರವಿದಾಸರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎನ್ನುವ ಕನಸನ್ನು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೊಂದಿದ್ದರು. ಆದರೆ ಅದು ಕನಸಾಗಿಯೇ ಉಳಿದಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದಾರೆ.

1997ರಲ್ಲಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ವಾರಣಾಸಿಯಲ್ಲಿ ಸಂತ ರವಿದಾಸ್ ಅವರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಮೈತ್ರಿ ಪಕ್ಷವಾಗಿದ್ದ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ರವಿದಾಸ್ ಸ್ಮಾರಕ ನಿರ್ಮಾಣವನ್ನು ಕೈಬಿಡಲಾಗಿತ್ತು. ಈ ಯೋಜನೆಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಕೈಗೆತ್ತಿಕೊಂಡಿದ್ದು ಮಂಗಳವಾರ ಶಂಕುಸ್ಥಾಪನಾ ಕಾರ್ಯ ನಡೆಯಲಿದೆ.

ಸಂತ ರವಿದಾಸ್ ಜಯಂತಿ ಮಂಗಳವಾರ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಜಯಂತಿಯಲ್ಲಿ ಭಾಗವಹಿಸಿ ರವಿದಾಸ್ ಜನ್ಮಭೂಮಿ ಕ್ಷೇತ್ರ ವಿಕಾಸ ಪರಿಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಈ ಯೋಜನೆ ಅಡಿಯಲ್ಲಿ ಪಾರ್ಕ್, ಒಂದು ಹಾಲ್ ಮತ್ತು ರವಿದಾಸ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾರಣಾಸಿಯ ಜಿಲ್ಲಾಧಿಕಾರಿ ಸುರೇಂದ್ರ ಸಿಂಗ್ ಅವರು, ಸಂತ ರವಿದಾಸ್ ಜನ್ಮಭೂಮಿ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 46 ಕೋಟಿ ರೂ. ಮಂಜೂರು ಮಾಡಿದೆ. ಈ ಯೋಜನೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *