ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

ಮುಂಬೈ: ಹಿಂದುತ್ವದ ವಿಚಾರವಾದಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡದೆ ಕಾಂಗ್ರೆಸ್ ಅವಮಾನಿಸಿದೆ. ಅವರ ಮೌಲ್ಯಗಳು ರಾಷ್ಟ್ರ ನಿರ್ಮಾಣಕ್ಕೆ ಆಧಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ನಿರಾಕರಿಸಿತು. ಅಲ್ಲದೆ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡದೆಯೂ ಅವಮಾನಿಸಿದೆ. ಮಾತ್ರವಲ್ಲದೆ ಇದೀಗ ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಪಡಿಸಿರುವುದನ್ನು ಸಹ ವಿರೋಧಿಸುತ್ತಿದೆ. ಆದರೆ ನಾವು ಸಾವರ್ಕರ್ ಅವರ ಸಂಸ್ಕಾರಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಧಾರವನ್ನಾಗಿಸಿಕೊಂಡಿದ್ದೇವೆ ಎಂದರು.

ಅಕ್ಟೋಬರ್ 21ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಇದರಲ್ಲಿ ಸಹ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದು ಪ್ರಮುಖ ಅಂಶವಾಗಿದೆ. ಪ್ರಣಾಳಿಕೆಯಲ್ಲಿ ಘೋಷಣೆಯಾದ ಮರುದಿನವೇ ಇಂದು ಪ್ರಧಾನಿ ನರೇಂದ್ರ ಮೋದಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷಗಳು ನಾಚಿಕೆ ಇಲ್ಲದವು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮಾಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ 370ನೇ ವಿಧಿ ಏನು ಎಂದು ಬಹಿರಂಗವಾಗಿ ಪ್ರಶ್ನಿಸುವ ಜನರಿದ್ದಾರೆ. ನಾನು ಅಂತಹವರಿಗೆ ಹೇಳಲು ಬಯಸುತ್ತೇನೆ, ಮಹಾರಾಷ್ಟ್ರದಂತೆಯೇ ಜಮ್ಮು ಕಾಶ್ಮೀರದ ಜನರು ಸಹ ಭಾರತಕ್ಕೆ ಸೇರಿದವರು ಎಂದರು.

ಕಾಂಗ್ರೆಸ್-ಎನ್‍ಸಿಪಿಯದ್ದು ಭ್ರಷ್ಟ ಮೈತ್ರಿ, ಇದು ಮಹಾರಾಷ್ಟ್ರವನ್ನು ಒಂದು ದಶಕ ಹಿಂದಕ್ಕೆ ಕೊಂಡೊಯ್ದಿದೆ ಎಂದು ಮೈತ್ರಿ ಕುರಿತು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *