‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

– ವಿದ್ಯಾರ್ಥಿಗಳ ಕಲಿಕೆ ಬಗ್ಗೆ ವ್ಯಂಗ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

ರಾಯಚೂರು: ರಾಜ್ಯದ ಶಾಲೆಯೊಂದರಲ್ಲಿ ಮಗುವೊಂದು ಶಿಕ್ಷಕರೊಬ್ಬರು ಹೇಳಿಕೊಡುತ್ತಿರುವ ‘ಪಕ್ಕೆಲುಬು’ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದೇ ಪದೇ ಪದೇ ತಪ್ಪು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಚಿವರು, ಘಟನೆ ನಡೆದಿರುವ ಶಾಲೆಯನ್ನು ಪತ್ತೆ ಹಚ್ಚಬೇಕು. ಯಾವ ಶಿಕ್ಷಕರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ. ಜೊತೆಗೆ ಆ ಶಿಕ್ಷಕರ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದೆಂಬ ಸೂತ್ತೋಲೆ ಹೊರಡಿಸಬೇಕು ಎಂದು ಸೂಚಿಸಿದ್ದಾರೆ.

ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರ ಕಲಿಕೆಯ ನಂತರ ಆ ಪದದ ಕುರಿತು ಮಗುವಿಗೆ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಚಾರ ಸಾಧ್ಯವಾಗುತ್ತದೆ. ಆದರೆ ಮಗುವೊಂದು ಕಲಿಕಾ ಹಂತದಲ್ಲಿ ತಪ್ಪು ಉಚ್ಚಾರ ಮಾಡುವುದನ್ನು ವಿಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರೆ ಮಗುವಿಗೆ ಗೊತ್ತಾದಾಗ ಆತನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಜೊತೆಗೆ ಆ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿಯುತ್ತಾನೆ ಎಂದು ಸಚಿವರು ಕಾಳಜಿ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಉಚ್ಚಾರ ಮಾಡುವುದನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಬಾರದು. ಇಂತಹ ಕೆಲಸ ನಿಜಕ್ಕೂ ಅಪರಾಧ. ತಕ್ಷಣವೇ ವಿಡಿಯೋ ವೈರಲ್ ಮಾಡಿದ ಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *