ಮೆಟ್ರೋ ದರ ಏರಿಕೆ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿ ರದ್ದು

ಬೆಂಗಳೂರು: ಮೆಟ್ರೋ (Namma Metro) ದರ ಏರಿಕೆ ಸಂಬಂಧ ಇಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (BMRCL) ಕರೆದಿದ್ದ ಸುದ್ದಿಗೋಷ್ಠಿಯನ್ನು  ರದ್ದು ಮಾಡಲಾಗಿದೆ.

ಶುಕ್ರವಾರದ ಬೋರ್ಡ್‌ ಸಭೆಯಲ್ಲಿ ದರ ಏರಿಕೆ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ಬಿಎಂಆರ್‌ಸಿಎಲ್‌ ಸುದ್ದಿಗೋಷ್ಠಿ (Press Meet) ನಡೆಸಿ ದರ ಏರಿಕೆಯ ಬಗ್ಗೆ ವಿವರಣೆ ನೀಡಬೇಕಿತ್ತು. ಆದರೆ ಬಿಎಂಆರ್‌ಸಿಎಲ್‌ ಕರೆದಿದ್ದ ಸುದ್ದಿಗೋಷ್ಠಿಯನ್ನು ದಿಢೀರ್‌ ರದ್ದು ಮಾಡಿದೆ. ಇದನ್ನೂ ಓದಿ: ಬಸ್‌ ಆಯ್ತು, ಈಗ ಮೆಟ್ರೋ ದರ ಏರಿಕೆ – ದರ ಏರಿಕೆ ಸಂಬಂಧ ಪರಿಷ್ಕರಣ ಸಮಿತಿ ನೀಡಿರುವ ವರದಿಯಲ್ಲಿ ಏನಿದೆ?

ಸುದ್ದಿಗೋಷ್ಠಿ ರದ್ದಿಗೆ ಕಾರಣ ನೀಡಿಲ್ಲ. ದರ ಏರಿಕೆ ಖಚಿತವಾಗಿದ್ದರೂ ಕನಿಷ್ಠ, ಗರಿಷ್ಠದ ಜೊತೆ ಮಧ್ಯದಲ್ಲಿ ಬರುವ ನಿಲ್ದಾಣಗಳಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವುದರ ಬಗ್ಗೆ ಗೊಂದಲ ಇರುವ ಕಾರಣ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.

ಗೊಂದಲಗಳನ್ನು ಇತ್ಯರ್ಥ ಮಾಡಿ ಮುಂದಿನ ವಾರ ಮೆಟ್ರೋ ದರ ಏರಿಕೆ ಸಂಬಂಧ ಸುದ್ದಿಗೋಷ್ಠಿ ನಡೆಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.