ಶಬರಿಮಲೆಗೆ ಭೇಟಿ| ಲ್ಯಾಂಡಿಂಗ್‌ ವೇಳೆ ಹೂತು ಹೋಯ್ತು ಮುರ್ಮು ಪ್ರಯಾಣಿಸಿದ್ದ ಹೆಲಿಕಾಪ್ಟರ್‌

ತಿರುವನಂತಪುರಂ: ಲ್ಯಾಂಡಿಂಗ್ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು  ಹೆಲಿಕಾಪ್ಟರ್ ಚಕ್ರ ಹೂತುಹೋದ ಘಟನೆ ನಡೆದಿದೆ.

ಶಬರಿಮಲೆಗೆ ಭೇಟಿ ನೀಡುವ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಸೇನೆಯ ಎಂಐ -17 ಹೆಲಿಕಾಪ್ಟರ್‌ನಲ್ಲಿ ತಿರುವನಂತಪುರಂನಿಂದ ತೆರಳಿದ್ದರು.

ಬೆಳಗ್ಗೆ ಪ್ರಮಾಡಂ ಇನ್ ಡೋರ್ ಸ್ಟೇಡಿಯಂನಲ್ಲಿ ಲ್ಯಾಂಡಿಂಗ್ ಆಗುವಾಗ ಹೆಲಿಕಾಪ್ಟರ್  ಚಕ್ರ ನೆಲದಲ್ಲಿ ಹೂತು ಹೋಗಿತ್ತು. ಬಳಿಕ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಸೇರಿ ಹೆಲಿಕಾಪ್ಟರ್ ತಳ್ಳಿ ಬದಿಗೆ ಸರಿಸಿದ್ದಾರೆ.

ಪೂರ್ವನಿಗದಿ ಪ್ರಕಾರ ಇಂದು ರಾಷ್ಟ್ರಪತಿಗಳು ನೀಲಕ್ಕಲ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ಬಳಿ ಇಂದು ಹೆಲಿಕಾಪ್ಟರ್‌ ಅನ್ನು ಲ್ಯಾಂಡ್‌ ಮಾಡಿಸಲಾಯ್ತು.

ಕೊನೆಯ ಕ್ಷಣದಲ್ಲಿ ಪ್ರಮಾಡಂ ಜಾಗ ನಿಗದಿ ಮಾಡಿದ್ದರಿಂದ ಮಂಗಳವಾರ ತಡರಾತ್ರಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ತೂಕದ ಕಾರಣಕ್ಕೆ ಹೆಲಿಕಾಪ್ಟರ್ ಚಕ್ರ ಹೂತು ಹೋಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಿಂದ ಇಳಿದ ಬಳಿಕ ರಾಷ್ಟ್ರಪತಿಗಳು ಕಾರಿನಲ್ಲಿ ಕುಳಿತು ಶಬರಿಮಲೆಗೆ ಪ್ರಯಾಣಿಸಿದರು.