ಮದ್ವೆಯಾಗುವುದಾಗಿ ನಂಬಿಸಿ 3-4 ಬಾರಿ ಅತ್ಯಾಚಾರ- ವಿಷ ಕುಡಿದ ಗರ್ಭಿಣಿ

ಚಿತ್ರದುರ್ಗ: ಗರ್ಭಿಣಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಹುಲ್ಲೂರು ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

ಉಮೇಶ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಏಳು ತಿಂಗಳ ಗರ್ಭಿಣಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಆರೋಪಿ ವಿರುದ್ಧ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?: ನಾನು ನನ್ನ ತಾಯಿಯ ಜೊತೆ ವಾಸಿಸುತ್ತಿದ್ದೆ.  ಮನೆ- ಹೊಲದ ಕೆಲಸ ಮಾಡಿಕೊಂಡು ಮನೆಯಲ್ಲಿರುತ್ತಿದ್ದೆ. ಅದೇ ಗ್ರಾಮದ ಉಮೇಶ್ ಹಾಗೂ ನಾನು ಪ್ರೀತಿಸುತ್ತಿದ್ದೆವು. ಅಕ್ಟೋಬರ್ ನಲ್ಲಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದನು. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪ್ರಾಣಸಹಿತ ಬಿಡುವುದಿಲ್ಲ ಎಂದು ಹೆದರಿಸಿದ್ದನು. ನಂತರ ನಮ್ಮ ಪೋಷಕರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದು 4- 5 ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಉಮೇಶ್ ಗೆ ಫೋನ್ ಮಾಡಿ ತಿಳಿಸಿದ್ದೆ. ಆಗ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದ. ಆದರೆ ನಮ್ಮ ಚಿಕ್ಕಮ್ಮ ಅವರಿಂದ ಇದೇ ತಿಂಗಳು ದಿನಾಂಕ 11ರಂದು ಆತ ಬೇರೆ ಹುಡುಗಿ ಜೊತೆ ಮದುವೆ ನಿಶ್ಚಯವಾಗಿದೆ ಎಂಬ ವಿಷಯ ತಿಳಿಯಿತು. ನಾನು ಫೋನ್ ಮಾಡಿದರೂ ಅವನು ರಿಸೀವ್ ಮಾಡುತ್ತಿರಲಿಲ್ಲ. ನನಗೆ ನಂಬಿಸಿ ಮೋಸ ಮಾಡಿದ್ದಾನೆ. ಆದ್ದರಿಂದ ನನಗೆ  ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಎರಡು ದಿನಗಳಿಂದ ದೂರು ದಾಖಲಿಸಿಕೊಳ್ಳದೆ ಪೊಲೀಸರು ನಿರ್ಲಕ್ಷಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸೋಮವಾರ ತಡರಾತ್ರಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *