ಕಲಬುರಗಿ: ಜೂನ್‍ನಿಂದ ಅಕ್ಟೋಬರ್‍ವರೆಗೆ ಈ ಗ್ರಾಮದಲ್ಲಿ ಗರ್ಭಿಣಿಯರು ಇರಲ್ಲ!

ಕಲಬುರಗಿ: ಜಿಲ್ಲೆಯ ಬಿಕ್ಕನಳ್ಳಿ ಗ್ರಾಮದಲ್ಲಿ ಮಳೆಗಾಲ ಆರಂಭವಾಗ್ತಿದ್ದಂತೆ ತುಂಬು ಗರ್ಭಿಣಿಯರನ್ನು ಜೂನ್‍ನಿಂದ ಅಕ್ಟೋಬರ್ ತಿಂಗಳವರೆಗೆ ಗ್ರಾಮದಿಂದ ಹೊರಗಿಡ್ತಾರೆ.

ಹೌದು. ವಿಚಿತ್ರ ಆದ್ರೂ ಸತ್ಯ. ಜೂನ್ ತಿಂಗಳು ಆರಂಭವಾಗ್ತಿದ್ದಂತೆ ಈ ಗ್ರಾಮದ ತುಂಬು ಗರ್ಭಿಣಿಯರು ಸಂಬಂಧಿಕರ ಮನೆಗೆ ಶಿಫ್ಟ್ ಆಗ್ತಾರೆ. ಯಾಕಂದ್ರೆ ಜೂನ್ ತಿಂಗಳಲ್ಲಿ ಮಳೆ ಶುರುವಾದ್ರೆ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗುತ್ತೆ. ಇದ್ರಿಂದ ಗರ್ಭಿಣಿಯರಿಗೆ ವೈದ್ಯಕೀಯ ಸೇವೆ ಸಿಗಲ್ಲ. ಹೀಗಾಗಿ ಜೂನ್‍ನಿಂದ ಅಕ್ಟೋಬರ್‍ವರೆಗೆ ಗರ್ಭಿಣಿಯರು ಸಂಬಂಧಿಕರ ಮನೆಯಲ್ಲಿ ವಾಸಿಸ್ತಾರೆ.

ಗ್ರಾಮಸ್ಥರ ಈ ಗೋಳು ಕಂಡ ಜನಪ್ರತಿನಿಧಿಗಳು ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗಿದ್ರು. ಆದ್ರೆ ಈ ಏರಿಯಾ ಕೊಂಚಾವರಂ ಸಂರಕ್ಷಿತ ಅರಣ್ಯ ಪ್ರದೇಶವಾದ್ರಿಂದ ಅರಣ್ಯ ಇಲಾಖೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ಈ ಗ್ರಾಮವನ್ನೇ ಬೇರೆಡೆ ಶಿಫ್ಟ್ ಮಾಡಲು ಯೋಜನೆ ರೂಪಿಸಿ ಪ್ರತಿ ಮನೆಗೆ 10 ಲಕ್ಷ ರೂ. ನಿಗದಿ ಮಾಡಿದೆ. ಆದ್ರೆ ಅರಣ್ಯದಲ್ಲಿರುವ ಇವರ ಜಮೀನುಗಳಿಗೆ ಕಂದಾಯ ಇಲಾಖೆ ಪರಿಹಾರ ನೀಡಲು ಮೀನಾ ಮೇಷ ಎಣಿಸ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಕಾಡಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತು ಈ ಗ್ರಾಮವನ್ನು ಕಾಡಿನಿಂದ ನಾಡಿಗೆ ಶಿಫ್ಟ್ ಮಾಡಬೇಕಾಗಿದೆ. ಆಗ ಮಾತ್ರ ಈ ಗ್ರಾಮದ ತುಂಬು ಗರ್ಭಿಣಿಯರು ನಿರಾಳವಾಗಿ ಕಾಲ ಕಳೆಯುವಂತಾಗುತ್ತೆ.

Comments

Leave a Reply

Your email address will not be published. Required fields are marked *