ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

– ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಕುಟುಂಬಸ್ಥರು
– ಸರಣಿ ಸಾವಿನಿಂದ ಜಿಲ್ಲಾಸ್ಪತ್ರೆಗೆ ಬಂದಿದೆ ಕಪ್ಪು ಚುಕ್ಕೆ

ಬಳ್ಳಾರಿ: ಬಾಣಂತಿಯರ ಸರಣಿ ಸಾವಿನ ಪ್ರಕರಣ (Maternal Deaths Case) ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾಸ್ಪತ್ರೆಯಲ್ಲಿ (District Hospital) ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು (Pregnant Women) ಹಿಂದೇಟು ಹಾಕಿದ್ದು, ದಾಖಲಾಗುವ ಗರ್ಭಿಣಿಯರ ಪ್ರಮಾಣ ಅರ್ಧಕರ್ಧ ಇಳಿದಿದೆ.

ನವೆಂಬರ್ 10 ರಂದು ಸಿಸೇರಿಯನ್‌ ಮೂಲಕ ಹೆರಿಗೆಯಾದ ಬಳಿಕ ಐವಿ ಫ್ಲೂಯಿಡ್‌ ಗ್ಲೂಕೋಸ್ ರಿಯಾಕ್ಷನ್‌ನಿಂದಾಗಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಹೆರಿಗೆ ಬಂದಾಗ ಆರೋಗ್ಯವಾಗಿಯೇ ಇದ್ದ ಲಲಿತಾ, ನಂದಿನಿ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಏಕಾಏಕಿ ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೇ ಉಸಿರು ಚೆಲ್ಲಿದ್ದರು.

ಈ ಪ್ರಕರಣ ದೇಶಾದ್ಯಂತ ವರದಿಯಾದ ನಂತರ ಈಗ ಹೆರಿಗೆಗೆ ಬರಲು ಗರ್ಭಿಣಿಯರು ಭಯ ಪಡುತ್ತಿದ್ದಾರೆ. ಗರ್ಭಿಣಿಯರಲ್ಲದೇ ಕುಟುಂಬಸ್ಥರೂ ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡದೇ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದರಿಂದ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗುವವರ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಇಳಿಕೆಯಾಗಿದೆ. ಇದನ್ನೂ ಓದಿ: ಕೊಲ್ಲಾಪುರದ ಕಾಳಮ್ಮವಾಡಿ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಸೋರಿಕೆ

ಎಷ್ಟು ಇಳಿಕೆಯಾಗಿದೆ?
ಕಳೆದ ಮೂರು ತಿಂಗಳ ಅಂಕಿ ಅಂಶ ನೋಡುವುದಾದರೆ ಸೆಪ್ಟೆಂಬರ್‌ನಲ್ಲಿ 585, ಅಕ್ಟೋಬರ್‌ನಲ್ಲಿ 577 ಗರ್ಭಿಣಿಯರು ಹೆರಿಗೆಗೆ ದಾಖಲಾಗಿದ್ದರು. ನವೆಂಬರ್ ತಿಂಗಳಲ್ಲಿ ಬಾಣಂತಿಯರ ಸರಣಿ ಸಾವಾಗಿದ್ದರಿಂದ ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ಸಂಖ್ಯೆ 289ಕ್ಕೆ ಕುಸಿದಿದೆ.

ಪ್ರತೀ ವರ್ಷ ಜಿಲ್ಲಾಸ್ಪತ್ರೆಯಲ್ಲಿ ಸರಿ ಸುಮಾರು ಆರು ಸಾವಿರ ಹೆರಿಗೆಗಳು ಆಗುತ್ತಿದ್ದು ಪ್ರತಿ ತಿಂಗಳು ಕನಿಷ್ಟ 500 ಮಂದಿಯಾದರೂ ದಾಖಲಾಗುತ್ತಿದ್ದರು. ಆದರೆ ಒಂದೇ ತಿಂಗಳಿನಲ್ಲಿ ಇಷ್ಟೊಂದು ಸಂಖ್ಯೆ ಇಳಿಕೆಯಾಗಿದ್ದು ಇದೇ ಮೊದಲು.

ಬಾಣಂತಿಯರ ಸರಣಿ ಸಾವು, ಆಸುರಕ್ಷತೆ, ವೈದ್ಯರ ನಿರ್ಲಕ್ಷ್ಯ ಭಾವನೆ, ಕಳಪೆ ಔಷಧ, ಅವಧಿ ಮುಗಿದಿರುವ ಔಷಧಿಗಳ ಬಳಕೆ ಬಗ್ಗೆ ಅನುಮಾನ ಎದ್ದಿರುವ ಕಾರಣ ಬಾಣಂತಿಯರು ಇಲ್ಲಿ ಹೆರಿಗೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಬಳ್ಳಾರಿ ಜಿಲ್ಲಾಸ್ಪತ್ರೆ ಸುರಕ್ಷಿತ ಹೆರಿಗೆ, ಸ್ವಚ್ಚತೆ, ಗುಣಮಟ್ಟದ ಚಿಕಿತ್ಸೆಗಾಗಿ ಪ್ರಶಸ್ತಿ ಪಡೆದಿತ್ತು. ಈಗ ಬಾಣಂತಿಯರ ಸರಣಿ ಸಾವಿನಿಂದ ಆಸ್ಪತ್ರೆಗೆ ಕಪ್ಪು ಚುಕ್ಕೆ ಬಂದಿದೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗಿರುವ ಅಪನಂಬಿಕೆ ದೂರ ಮಾಡುವ ಕೆಲಸ ನಡೆಸಬೇಕಿದೆ.