ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಅಂತಾನಾ? – ತನ್ವೀರ್ ಸೇಠ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

Pratap simha

ಮೈಸೂರು: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಎಂದು ಅರ್ಥನಾ? ಹೆಣ್ಣನ್ನು ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹರವರು ತನ್ವೀರ್ ಸೇಠ್ ವಿರುದ್ಧ ಕಿಡಿಕಾರಿದ್ದಾರೆ.

ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ, ನಿಮ್ಮ ಧಮ್ಕಿಗೆಲ್ಲ ನಾವು ಹೆದರಲ್ಲ ಎಂಬ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಫ್ ಸಿಂಹರವರು, ತನ್ವೀರ್ ಸೇಠ್‍ರವರು ಇತರ ಅಲ್ಪಸಂಖ್ಯಾತರ ನಾಯಕರ ರೀತಿ ಅಲ್ಲ ಅಂದುಕೋಂಡಿದ್ದೆ. ಅವರಿಂದ ನಾನು ಇಂತಹ ಮಾತು ನಿರೀಕ್ಷಿಸಿರಲಿಲ್ಲ. ನಾವೆಲ್ಲ ಬಳೆ ತೊಟ್ಟಿಲ್ಲ ಎಂದರೆ ಅರ್ಥ ಏನು? ನಾವು ಹೆಣ್ಣಿಗೆ ಚೆಂದವಾದ ಸೀರೆ, ಬಳೆ ತೊಡಿಸಿ ನಮ್ಮ ದೇವ, ದೇವತೆಗಳನ್ನು ಆರಾಧಿಸುತ್ತೇವೆ. ನಮ್ಮ ಧರ್ಮದ ಅತ್ಯುನ್ನತವಾದಂತಹ ದೇವತೆಗಳಾದ ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣು. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಅತೀ ಹೆಚ್ಚು ಗೌರವ ಕೊಡುತ್ತೇವೆ. ಹೆಣ್ಣು ಬಳೆ ತೊಟ್ಟಿದ್ದಾಳೆ ಎಂದರೆ ಅಬಲೆ ಎಂದು ಅರ್ಥನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

ಒಂದು ಹೆಣ್ಣಿನ ಬಗ್ಗೆ ನಿಮಗೇಕೆ ತಾತ್ಸಾರ? ನೀವು ಬಹಳ ಪ್ರೀತಿಸುವಂತಹ ಹೈದರಾಲಿ ಇದ್ದಾರಲ್ಲ ಅವರನ್ನು ಹೊಡೆದ ಓನಕೆ ಒಬ್ವವ ಕೂಡ ಒಂದು ಹೆಣ್ಣು. ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಕಿತ್ತೂರು ರಾಣಿ ಚೆನ್ನಮ್ಮ, ಡಚ್ಚರ ವಿರುದ್ಧ ಹೋರಾಟ ಮಾಡಿದ ರಾಣಿ ಅಬ್ಬಕ್ಕ, ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಜಾನ್ಸಿ ರಾಣಿ ಲಕ್ಷ್ಮೀ ಭಾಯಿ ಕೂಡ ಒಬ್ಬ ಹೆಣ್ಣು. ಅವರು ಕೂಡ ಕೈಗೆ ಬಳೆಯನ್ನೇ ತೊಟ್ಟುಕೊಂಡಿದ್ದಾರೆ. ನಾವು ಮಹಿಳೆಯರನ್ನು ಆರಾಧಿಸುತ್ತೇವೆ. ಮಹಿಳೆಯರು ನಮ್ಮನ್ನು ರಕ್ಷಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಕೂಡ ಒಂದು ಹೆಣ್ಣು. ನಾವು ಪೂಜಿಸಿ, ಪುಷ್ಪರ್ಚನೆ ಮಾಡುವ ತಾಯಿ ಭುವನೇಶ್ವರಿ ಕೂಡ ಒಂದು ಹೆಣ್ಣು. ಹೆಣ್ಣನ್ನು ತಾತ್ಸಾರದಿಂದ ಕಾಣಬೇಡಿ. ನಿಮ್ಮ ಪೌರುಷ, ಹುಸಿ ಧೈರ್ಯವನ್ನು ತೋರಿಸುವ ಸಲುವಾಗಿ ಹೆಣ್ಣನ್ನು ಕಡಿಮೆಯಂತೆ ನೋಡಬೇಡಿ. ನಮ್ಮಲ್ಲಿ ಹೆಣ್ಣನ್ನು ಆರಾಧ್ಯ ಸ್ಥಾನದಲ್ಲಿಟ್ಟಿದ್ದೇವೆ. ನಿಮ್ಮ ಧರ್ಮದಲ್ಲಿ ನೀವು ಬೇಕಾದರೆ ಹೆಣ್ಣನ್ನು ಬುರ್ಕಾ ಒಳಗಡೆ ಕಟ್ಟಿಟ್ಟು, ಅಡುಗೆ ಕೋಣೆಗೆ ಸೀಮಿತವಾಗಿಸಿ, ಭೋಗದ ವಸ್ತುವಾಗಿ ನೀವು ನೋಡಬಹುದು. ಆದರೆ ನಮ್ಮ ಧರ್ಮ, ಸಂಸ್ಕೃತಿಯಲ್ಲಿ ನಾವು ಅವಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದೇವೆ. ನೀವು ಒಬ್ಬ ವಿದ್ಯಾವಂತರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಅದೆಲ್ಲದಕ್ಕೂ ಮುನ್ನ ನಿಮ್ಮ ಪಕ್ಷವನ್ನು ಮುನ್ನಡೆಸಿದಂತಹ ಇಂದಿರಾ ಗಾಂಧಿ ಕೂಡ ಒಂದು ಹೆಣ್ಣೆ ಆಗಿದ್ದರು. ಇಂದು ನಿಮ್ಮೆಲ್ಲರ ಅಧಿನಾಯಕಿ ಎಂದು ಒಪ್ಪಿಕೊಂಡಿರುವ ಸೋನಿಯಾ ಗಾಂಧಿ ಕೂಡ ಒಬ್ಬರು ಹೆಣ್ಣೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!

Comments

Leave a Reply

Your email address will not be published. Required fields are marked *