ಗೃಹ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ‘ಸ್ಕ್ರೂ ಡ್ರೈವರ್ ಅಭಿಯಾನ’ ಆರಂಭಿಸಿದ ಪ್ರತಾಪ್ ಸಿಂಹ

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬವರ ಕೊಲೆಯಾಗಿತ್ತು. ಸಂತೋಷರನ್ನು ಕೊಲೆ ಮಾಡಲು ದುಷ್ಕರ್ಮಿಗಳು ಸ್ಕ್ರೂ ಡ್ರೈವರ್ ಬಳಕೆ ಮಾಡಿದ್ದರು ಅಷ್ಟೇ ಎಂದು ಹೇಳಿಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ ಯುವ ಮೋರ್ಚಾ ವಿನೂತನ ಪ್ರತಿಭಟನೆ ಆರಂಭಿಸಿದೆ.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಕ್ರೂ ಡ್ರೈವರ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಗೃಹ ಸಚಿವರಿಗೆ ಸ್ಕ್ರೂ ಡ್ರೈವರ್ ಕಳಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಗೆ ಸ್ಕ್ರೂಡ್ ಅಪ್ ಹೋಮ್ ಮಿನಿಸ್ಟರ್ (#ScrewedUpHomeMinister) ಎಂದು ಹೆಸರಿಟ್ಟಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟಕದಲ್ಲಿ ಸ್ಟೇಟ್ ಸ್ಪಾನ್ಸರ್ ಟೆರರಿಸಂ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಗೃಹ ಸಚಿವರು ಸಂವೇದನಾ ರಹಿತ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ 24 ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಡೆದಿದೆ. ರಾಮಲಿಂಗಾರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದೆ. ಮಂಗಳೂರು ದೀಪಕ್ ರಾವ್ ಹತ್ಯೆಯಾದಾಗ ತಮ್ಮ ಕಾರ್ಯದಕ್ಷತೆ ಬಗ್ಗೆ ಗೃಹ ಸಚಿವರಿಗೆ ಅನುಮಾನ ಬರಬೇಕಿತ್ತು. ಸಂತೋಷ್ ಹತ್ಯೆಯಾದಾಗ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಬೇಕಿತ್ತು. ಆದರೆ ಆರೋಪಿಯನ್ನು ಸಮರ್ಥಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರೋಪಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪ್ರತಿಭಟನೆ ಅಂದೋಲನದ ಮೂಲಕ ಗೃಹ ಸಚಿವರಿಗೆ ಸ್ಕ್ರೂ ಡ್ರೈವರ್ ಕೊರಿಯರ್ ಮಾಡಲಾಗುತ್ತದೆ. ನಾವು ಕಳುಹಿಸಿದ ಸ್ಕ್ರೂ ಡೈವರ್ ನೋಡಿದಾಗ 24 ಹರೆಯದ ಸಂತೋಷ್ ನೆನಪಾಗಬೇಕು. ತನ್ನ ಮಗಳ ಪ್ರಾಯದ ವಿಧವೆ ಹೆಣ್ಣು, ಇನ್ನೂ ಜಗತ್ತು ಕಾಣದ ಮಗುವಿನ ಚಿತ್ರ ಕಾಣಬೇಕು. ತಮ್ಮ ಹೇಳಿಕೆಯ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *